ಶ್ರೀ ಹಡಪದ ಅಪ್ಪಣ್ಣನವರ 889ನೇ ಜಯಂತಿ ಆಚರಣೆ

(ಸಂಜೆವಾಣಿ ವಾರ್ತೆ)
ವಿಜಯಪುರ : ಜು.4: ಶ್ರೀ ಹಡಪದ ಅಪ್ಪಣ್ಣನವರ 889ನೇ ಜಯಂತಿಯನ್ನು ಶ್ರೀ ಹಡಪದ ಅಪ್ಪಣ್ಣ ವಿವಿಧ ಉದ್ದೇಶಗಳ ಸಹಕಾರ ಸಂಘ ವಿಜಯಪುರದಲ್ಲಿ ಆಚರಣೆ ಮಾಡಲಾಯಿತು.
ಸಂಘದ ಅದ್ಯಕ್ಷರಾದ ಶ್ರೀ ಎನ್.ಎ.ನಾವಿ ಮಾತನಾಡಿ, ಬಸವಣ್ಣನವರು ಶರಣರ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು. ಬಸವಣ್ಣನವರಿಗೆ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾ ಮೌಢ್ಯವನ್ನು ತೊಡೆದು ಹಾಕಿ ಸಮಾನತೆಯನ್ನು ಸಾರಿದರು. ಕುಲಕಸುಬಿನ ಬಗ್ಗೆ ವೃತ್ತಿ ಗೌರವವನ್ನು ಹೊಂದಿದ್ದ ಅವರು ಸ್ವಾಭಿಮಾನದಿಂದ, ಆತ್ಮ ಸಂತೋಷದೊಂದಿಗೆ ಬದುಕಿ ನಿಜಸುಖಿ ಎನಿಸಿಕೊಂಡರು. ಅಪ್ಪಣ್ಣನವರು ಮಸಬಿನಾಳ ಗ್ರಾಮದಲ್ಲಿ ಜನಿಸಿ ತಮ್ಮದೇ ಆದ ಆದರ್ಶಗಳೊಂದಿಗೆ ಬಸವಣ್ಣನವರ ಮಹಾ ಮನೆಯ ಸದಸ್ಯರಗಿ, ಇತರ ಶರಣರೊಂದಿಗೆ ಶರಣತತ್ವ ಪಾಲಿಸಿದರು. 234 ವಚನಗಳನ್ನು ರಚಿಸಿರುವ ಅಪ್ಪಣ್ಣನವರು ಎಲ್ಲಿಯೂ ತಮ್ಮ ಜಾತಿ, ಕುಲಕಸುಬಿನ ಬಗ್ಗೆ ಕೀಳಾಗಿ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ. ಆದ್ದರಿಂದ ಆ ಸಮುದಾಯದವರು ಕೂಡ ತಮ್ಮ ವೃತ್ತಿ ಕುರಿತು ಕೀಳು ಭಾವನೆ ಹೊಂದದೇ ವೃತ್ತಿ ಗೌರವವನ್ನು ಪಾಲಿಸಿ ಅಪ್ಪಣ್ಣನವರ ಆದರ್ಶಗಳನ್ನು ಅನುಸರಿಸುತ್ತಾ ಅವರ ದಾರಿಯಲ್ಲಿ ಸಾಗೋಣ. ಇಂದಿನ ದಿನಗಳಲ್ಲಿ ಕುಲಕಸುಬಿನೊಂದಿಗೆ ಶಿಕ್ಷಣವೂ ಅತ್ಯವಶ್ಯಕವಾಗಿರುವುದರಿಂದ ಸಮುದಾಯವರು ನಿಮ್ಮ ಮಕ್ಕಳಿಗೆ ವೃತ್ತಿಯೊಂದಿಗೆ ಉತ್ತಮ ಶಿಕ್ಷಣವನ್ನು ನೀಡಿ ಸಮಾಜದ ಮುನ್ನೆಲೆಗೆ ಬರಲು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಚಿದಾನಂದ ಹ. ತೊರವಿ ನಿರ್ದೇಶಕರಾದ ಶಿವಾನಂದ ಆರ್.ನಾವಿ, ಪರಮಾನಂದ ಸಿ. ಹಡಪದ, ಮುಖ್ಯ ಕಾರ್ಯನಿರ್ವಾಹಕರಾದ ಓಂಕಾರ ಸಂ. ನಾವಿ ಹಾಗೂ ಬಸಗೊಂಡ ಶಿ. ನಾವಿ, ಕಲ್ಲು ಬ. ಹಡಪದ ಹಾಜರಿದ್ದರು.