ಶ್ರೀ ಸಿದ್ಧಾರೂಢ ಮಠದಲ್ಲಿ ಸೆ. 1 ರಂದು ಜಲರಥೋತ್ಸವ

ಹುಬ್ಬಳ್ಳಿ, ಆ 25: ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳ 94ನೇ ಪುಣ್ಯಾರಾಧನೆ ಕಾರ್ಯಕ್ರಮ ಆಗಸ್ಟ್ 26 ರಿಂದ ಸೆಪ್ಟಂಬರ್ 1 ರವರೆಗೆ ನಡೆಯುವುದೆಂದು ಶ್ರೀಮಠದ ಟ್ರಸ್ಟನ ಚೇರಮನ್ ಬಸವರಾಜ ಕಲ್ಯಾಣಶೆಟ್ಟರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 1 ರಂದು ಶ್ರೀಗಳವರ ಪಾಲಕಿ ವಾದ್ಯ ಮೇಳಗಳೊಂದಿಗೆ ನಗರದಲ್ಲಿ ಸಂಚರಿಸಿ ಬಂದ ನಂತರ ಸಾಯಂಕಾಲ 5-30ಕ್ಕೆ ಜಲರಥೋತ್ಸವ ಜರುಗುವುದು ನಂತರ ಮಹಾಪೂಜೆಯೊಂದಿಗೆ ಉತ್ಸವವು ಸಮಾಪ್ತಿಯಾಗುವುದು ಎಂದರು.
ಶ್ರಾವಣ ಮಾಸದ ಅನ್ನಸಂತರ್ಪಣೆಯನ್ನು ಸುಭಾಸ ಗಾಂವಕರ, ಜಿ.ಎಮ್. ಶಿರಕೋಳ ಹಾಗೂ ಕುಟುಂಬದವರು, ಎಸ್.ಎಸ್. ಪೊಲೀಸ್‍ಪಾಟೀಲ, ರಾಜು ಬಳಲುಪುಟ್ಟಿ, ವಿಠ್ಠಲ ಗಿರಡ್ಡಿ ಒಂದು ದಿವಸ ನೆರವೇರಿಸುವರು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೈಸ್ ಚೇರಮನ್ ಉದಯಕುಮಾರ ನಾಯ್ಕ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ರಮೇಶ ಬೆಳಗಾವಿ, ವಿನಾಯಕ ಘೋಡ್ಕೆ, ವಿ.ಡಿ. ಕಾಮರಡ್ಡಿ, ವಿ.ವಿ. ಮಲ್ಲಾಪುರ, ಗೀತಾ ಕಲಬುರ್ಗಿ, ಬಾಳು ಮಗಜಿಕೊಂಡಿ, ಮ್ಯಾನೇಜರ್ ಈರಣ್ಣ ತುಪ್ಪದ ಮತ್ತಿತರರು ಇದ್ದರು.