ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆ

ಸಂಜೆವಾಣಿ ವಾರ್ತೆ

 ದಾವಣಗೆರೆ. ಆ.19;ದಾವಣಗೆರೆಯ  ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಎಂ. ಎಸ್. ಶಿವಣ್ಣ ನವರ 84 ನೇ ಹುಟ್ಟುಹಬ್ಬವನ್ನು ಸಂಸ್ಥಾಪಕರ ದಿನಾಚರಣೆಯನ್ನಾಗಿ ಸಂಭ್ರಮ ಉತ್ಸಾಹದಿಂದ ಆಚರಿಸಲಾಯಿತು.  ಶಾಲೆಯ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಶಿವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಮಕ್ಕಳು, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರಿಂದ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ರವರ ಅಧ್ಯಕ್ಷತೆಯಲ್ಲಿ ಸಮಾರಂಭ ಏರ್ಪಡಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ, ಹಿರಿಯ ಉಪನ್ಯಾಸಕರಾದ ಎಲ್. ವಿ. ಸುಬ್ರಹ್ಮಣ್ಯ, ಕೆ. ಸಿ. ಸಿದ್ದಪ್ಪ, ಯು. ಡಿ. ಲಕ್ಷಿö್ಮನಾರಾಯಣ, ಆರ್. ಮಂಜುನಾಥ, ನರಸಿಂಹ, ಸಂಸ್ಥೆಯ ಕಾರ್ಯದರ್ಶಿ ಹೇಮಂತ್, ನಿರ್ದೇಶಕ ಡಾ|| ಜಯಂತ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಎಂ. ಎಸ್. ಶಿವಣ್ಣನವರ ಯಶೋಗಾಥೆಯನ್ನು ಹಿರಿಯ ಉಪನ್ಯಾಸರಾದ ಆರ್. ಮಂಜುನಾಥ ರವರಿಂದ ಸವಿಸ್ತಾರವಾಗಿ ತಿಳಿದು ಚಕಿತಗೊಂಡರು. ಬರಿಗೈಯಿಂದ ಬಂದ ಶಿವಣ್ಣನವರು ದಾವಣಗೆರೆಯ ಶಿಕ್ಷಣ ಕಾಶಿಯಲ್ಲಿ ಇಂತಹ ಬೃಹತ್ ಸಂಸ್ಥೆಯನ್ನು ಕಟ್ಟಲು ಪಟ್ಟ ಪರಿಶ್ರಮವನ್ನು ಮಕ್ಕಳ ಮುಂದೆ ಚಿತ್ರಿಸಿದರು. ಸಿದ್ಧಗಂಗಾ ಕಳೆದ 53 ವರ್ಷಗಳಿಂದ ಸಹಸ್ರಾರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿದೆ. ಸ್ವತಂತ್ರವಾಗಿ ಬಾಳುವುದನ್ನು ಕಲಿಸಿದೆ. ನಾಯಕರನ್ನು ರೂಪಿಸುವ ಕೇಂದ್ರ ಇದಾಗಿದೆ. ಮಕ್ಕಳ ಪ್ರತಿಭೆ, ಆಸಕ್ತಿ, ಕುತೂಹಲಗಳಿಗೆ ವೇದಿಕೆ ಒದಗಿಸಿ ಶಿವಣ್ಣನವರ ಆಶಯವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಹೇಳಿದರು. ದ್ವಿತೀಯ ಪಿಯುಸಿ ಯಶಸ್ವಿನಿ ಹೆಚ್. ಎಸ್ ಸ್ವಾಗತಿಸಿದಳು, ಭೂಮಿಕಾ. ಎಸ್. ಡಿ ವಂದಿಸಿದಳು, ಸಿಂಚನ. ಎಂ ಪ್ರಾರ್ಥನೆ ಮಾಡಿದಳು. ಮೃದುಲಾ. ಎಂ. ಕೆ ಶಿವಣ್ಣ ನವರ ಬಗ್ಗೆ ಕವನ ವಾಚಿಸಿದಳು. ನಿವೇದಿತ. ಎಂ ನಿರೂಪಣೆ ಮಾಡಿದಳು. ಆಗಸ್ಟ್ 17 ರಂದು ಹುಟ್ಟಿದ ಎಲ್ಲಾ ಮಕ್ಕಳ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ವೇದಿಕೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ನಂತರ ಮಕ್ಕಳಿಗೆ ಸಿಹಿ ವಿತರಿಸಲಾಯಿತು.