ಶ್ರೀ ಸಿದ್ದಾರೂಡ ಮಠದ ಗೋ ಶಾಲೆಗೆ 11 ಟ್ರ್ಯಾಕ್ಟರ್ ಮೇವು

ಗದಗ, ಮಾ28 : ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮಸ್ಥರಿಂದ ಹುಬ್ಬಳ್ಳಿ ಸಿದ್ದಾರೂಡ ಮಠದ ಗೋ ಶಾಲೆಗೆ ಸುಮಾರು 11 ಟ್ರ್ಯಾಕ್ಟರ್ ಬಿಳಿಜೋಳದ ಮೇವು ಸಂಗ್ರಹಿಸಿಕೊಂಡು, ತಮ್ಮ ಸ್ವಂತ ಖರ್ಚಿನಲ್ಲಿಯೇ ಟ್ರ್ಯಾಕ್ಟರ ಮೂಲಕ ಶನಿವಾರ ಹುಬ್ಬಳ್ಳಿಗೆ ತೆರಳಿ ಶ್ರೀ ಮಠದ ಗೋ ಶಾಲೆಗೆ ಸಮರ್ಪಿಸಿದರು.
ಹುಬ್ಬಳ್ಳಿ ಸಿದ್ದಾರೂಡ ಮಠದ ಪರಮ ಭಕ್ತರು ಎಂದೇ ಪ್ರಸಿದ್ದಿ ಪಡೆದಿರುವ ಮಾಡಲಗೇರಿ ಗ್ರಾಮಸ್ಥರು , ತಮ್ಮ ಜಮೀನಿನಲ್ಲಿ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿದ್ದ ಬಿಳಿಜೋಳದ ಮೇವುನ್ನು ಗೋಶಾಲೆಗೆ ನೀಡಿ, ಅಲ್ಲಿರುವ ನೂರಾರು ಜಾನುವಾರುಗಳಿಗೆ ಎದುರಾದ ಮೇವಿನ ಸಮಸ್ಯೆ ನಿವಾರಿಸುವಲ್ಲಿ ಶ್ರಮಿಸಿದರು.
ಈ ಕಾರ್ಯಕ್ಕೆ ಮಠದ ಆಡಳಿತ ಮಂಡಳಿಯವರು ಗ್ರಾಮಸ್ಥರ ಸೇವೆಗೆ ಬಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದಿನ ದಿನಮಾನಗಳಲ್ಲಿ ಮಠ ಮಾನ್ಯಗಳಿಗೆ ಸಾಕಷ್ಟು ಭಕ್ತರು ಹಣ ಸೇರಿದಂತೆ ಇತರೆ ವಸ್ತುಗಳನ್ನು ದಾನವಾಗಿ ನೀಡುತ್ತಾರೆ. ಆದರೆ ಧನಕರುಗಳಿಗೆ ಮೇವಿನ ವ್ಯವಸ್ಥೆ ಮಾಡುವವರು ತೀರಾ ವಿರಳ. ರೈತರು ಬರೀ ವಾಣಿಜ್ಯ ಬೆಳೆಗಳನ್ನೆ ಬೆಳೆಯುತ್ತಾರೆ. ಹೀಗಾಗಿ ಜೋಳ ಹಾಕುವುದೇ ಕಡಿಮೆ ಹೀಗಾಗಿ ಇಂದಿನ ದಿನಮಾನಗಳಲ್ಲಿ ಹಣ ಕೊಟ್ಟರೂ ಮೇವು ಸಿಗುವುದು ತೀರಾ ಕಡಿಮೆಯಾಗಿದೆ. ಈ ದಿಶೆಯಲ್ಲಿ ಮಾಡಲಗೇರಿ ಗ್ರಾಮಸ್ಥರು ಮೇವು ಸಂಗ್ರಹಿಸಿ ನೀಡಿರುವುದು ಮಹಾನ್ ಕಾರ್ಯವಾಗಿದೆ ಎಂದು ಶ್ರೀಮಠದ ರೇಣುಕಾಸ್ವಾಮಿಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲಾ ಟ್ರ್ಯಾಕ್ಟರ್ ಮಾಲೀಕರು ಹಾಗೂ ಗ್ರಾಮದ ಎಲ್ಲಾ ಭಕ್ತರನ್ನು ಮಠದ ಶ್ರೀಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ರೇಣುಕಾಸ್ವಾಮಿಜಿ, ಸಿದ್ದಾರೂಡ ಮಠದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು. ಮಾಡಲಗೇರಿ ಭಕ್ತರಿದ್ದರು.