
ಸಂಜೆವಾಣಿ ವಾರ್ತೆ
ಸಂಡೂರು:ಏ:2: ಏಕ ಕಾಲದಲ್ಲಿ ಮೂರು ಸ್ಥಳಗಳಲ್ಲಿ ಐಕ್ಯರಾದ ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ಮಹಾ ರಥೋತ್ಸವ ಅದ್ದೂರಿಯಾಗಿ ಯಶವಂತನಗರ ಗ್ರಾಮದಲ್ಲಿ ನಡೆಯಿತು.
ರಥೋತ್ಸವದ ಅಂಗವಾಗಿ ಶ್ರೀ ಸಿದ್ದರಾಮೇಶ್ವರ ಸ್ವಾಮಿಗೆ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮ ಅಭಿಷೇಕ ನಡೆಸಲಾಯಿತು, ಕಳೆದ ಒಂದು ವಾರದಿಂದಲೂ ರಥೋತ್ಸವದ ಅಂಗವಾಗಿ ಪುರಾಣ ಕಾರ್ಯಕ್ರಮವನ್ನು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ರಥೋತ್ಸವದ ದಿನದಂದು ಬೆಳಗಿನಿಂದಲೇ ಇಡೀ ಗ್ರಾಮವನ್ನು ಸಿಂಗರಿಸಲಾಗಿತ್ತು, ಅತಿ ಹೆಚ್ಚು ಮುಸ್ಲಿಂ ಬಾಂಧವರು ಇರುವ ಈ ಗ್ರಾಮದಲ್ಲಿ ಅವರೆಲ್ಲರೂ ಸಹ ರಥೋತ್ಸವ ಮತ್ತು ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದು ಬಹು ವಿಶೇಷವಾಗಿತ್ತು,
ಬೆಳಗಿನಿಂದಲೇ ಭಕ್ತರು ವಿಶೇಷ ನೈವೇದ್ಯ ಸಿದ್ದಪಡಿಸಿ ಸಿದ್ದರಾಮೇಶ್ವರ ಸ್ವಾಮಿಗೆ ಅರ್ಪಿಸಿದರೆ, ಸಿದ್ದರಾಮೇಶ್ವರ ಮಾಲಾಧಾರಿಗಳು ವಿಶೇಷವಾದ ಭಜನಾ ಕಾರ್ಯಕ್ರಮ ಮತ್ತು ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ರಥೋತ್ಸವವನ್ನು ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿ ಮಾತನಾಡಿ ರಥೋತ್ಸವ ಗ್ರಾಮೀಣ ಭಾಗದ ಜನತೆಯ ಸಾಂಸ್ಕೃತಿಕ ಹಬ್ಬವೇ ಅಗಿದೆ, ಈ ಸಂದರ್ಭದಲ್ಲಿ ಜನಪದ ನೃತ್ಯಗಳಾದ ಕೋಲಾಟ, ನಂದಿಕೋಲು ಕುಣಿತ, ಭಜನೆ ಪದಗಳ ಹಾಡುಗಾರಿಕೆ, ತತ್ವ ಪದಗಳ ಹಾಡುಗಾರಿಕೆ, ಪುರಾಣ ಕಾರ್ಯಕ್ರಮ, ಅಲ್ಲದೆ ವಿಶೇಷವಾಗಿ ಮಹಿಳೆಯರು ಭಕ್ತಿಯ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅದ್ದರಿಂದ ನಮ್ಮ ಸಂಸ್ಕೃತಿಯ ಉಳಿವು ಇಂತಹ ರಥೋತ್ಸವವದ ಮೂಲಕ ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸದ್ಭಕ್ತ ಮಂಡಳಿಯವರು ಉಪಸ್ಥಿತರಿದ್ದು ರಥೋತ್ಸವ ನಡೆಸಿಕೊಟ್ಟರು.