ಶ್ರೀ ಸಾಮಾನ್ಯನ ಹಕ್ಕುಗಳ ರಕ್ಷಣೆ ವಕೀಲರ ಕರ್ತವ್ಯ:ನ್ಯಾ.ಪ್ರಸನ್ನ ಬಿ.ವರಾಳೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.11: ಶ್ರೀ ಸಾಮಾನ್ಯನ ಕಾನೂನಾತ್ಮಾಕ ಹಕ್ಕುಗಳ ರಕ್ಷಣೆ ವಕೀಲರ ಕರ್ತವ್ಯವಾಗಿದೆ ಎಂದು ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ.ವರಾಳೆ ಅಭಿಪ್ರಾಯಪಟ್ಟರು.
ನಗರದ ತಾಳೂರು ರಸ್ತೆಯಲ್ಲಿರುವ ನೂತನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಿರ್ಮಾಣಗೊಂಡಿರುವ ಬಳ್ಳಾರಿ ವಕೀಲರ ಸಂಘದ ಸುಸಜ್ಜಿತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ವಕೀಲರು ಕಾನೂನಿನ ಪ್ರತಿನಿಧಿಗಳಿದ್ದಂತೆ. ವ್ಯವಸ್ಥೆ ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ನಡೆಯುತ್ತಿದ್ದರೆ ಅಭಿವೃದ್ಧಿಯನ್ನು ಶೀಘ್ರದಲ್ಲಿ ಹೊಂದಲು ಸಾಧ್ಯವಿದೆ. ಆದ್ದರಿಂದ ವ್ಯವಸ್ಥೆಯನ್ನು ಸಂವಿಧಾನಾತ್ಮಾಕ ಚೌಕಟ್ಟಿನಲ್ಲಿ ಇರುವಂತೆ ನೋಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ವಕೀಲರು ಮಾಡಬೇಕೆಂದರು.
ನಗರದಲ್ಲಿ ನಿರ್ಮಾಣಗೊಂಡಿರುವ ಸಂಘದ ಕಟ್ಟಡ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಇದರ ಸದುಪಯೋಗವಾಗಲಿ. ಕಿರಿಯ ವಕೀಲರಿಗೆ ಹಿರಿಯ ವಕೀಲರು ಮಾರ್ಗದರ್ಶನ ನೀಡುವ ಮೂಲಕ ಬಳ್ಳಾರಿ ವಕೀಲರ ಸಂಘದ ಇತಿಹಾಸವನ್ನು ಮುನ್ನಡೆಸಿ ಎಂದರು.
ಮಹಿಳಾ ವಕೀಲರನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಜಿಲ್ಲೆಯವರಾದ ನ್ಯಾಯಮೂರ್ತಿಗಳಾದ ಮಂಜುಳಾ ಚಲ್ಲೂರು ನ್ಯಾಯಾಂಗ ವ್ಯವಸ್ಥೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದು ಯುವ ಮಹಿಳಾ ವಕೀಲರು ನ್ಯಾಯಮೂರ್ತಿ ಮಂಜುಳಾ ಚಲ್ಲೂರು ಅವರನ್ನು ಆದರ್ಶವಾಗಿಟ್ಟುಕೊಂಡು ಅವರಂತೆ ಸಾಧನೆ ತೋರಬೇಕೆಂದರು.
ರಾಜ್ಯ ಕಾನೂನು ಸಚಿವರಾದ ಹೆಚ್.ಕೆ.ಪಾಟೇಲ್ ಮಾತನಾಡಿ, ವ್ಯಾಜ್ಯ ಮುಕ್ತ ಗ್ರಾಮ, ಸಮಾಜ ನಮ್ಮ ಗುರಿಯಾಗಬೇಕು, ಇದರಿಂದ ಮಾತ್ರ ಅಭಿವೃದ್ಧಿಯನ್ನು ತ್ವರಿತಗತಿಯಲ್ಲಿ ಸಾಧಿಸಲು ಸಾಧ್ಯ ಎಂದರು.
ವ್ಯಾಜ್ಯಮುಕ್ತ ಸಮಾಜ ನಿರ್ಮಾಣಗೊಂಡರೆ, ವಕೀಲರಿಗೇನು ಕೆಲಸ ಎಂದು ಬೇಸರಗೊಳ್ಳದಿರಿ ನಿಮಗೆ ರಾಜಕಾರಣ ಇದ್ದೇ ಇದೆ ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದರು.
ನ.26ಕ್ಕೆ ಸಂವಿಧಾನದ ಸಾಕ್ಷರತೆ ಕುರಿತು ಆಂದೋಲನವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದು ಇದಕ್ಕೆ ವಕೀಲರ ಸಹಕಾರ ಅಗತ್ಯ ಎಂದರು.
ನ್ಯಾಯಾಲಯದಲ್ಲಿ ಹೆಚ್ಚಿನ ಕನ್ನಡ ಬಳಕೆಗೆ ಅವಕಾಶ ಕಲ್ಪಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಾಗಿ ಇಂದಿಗೆ 50ವರ್ಷವಾಗಿದ್ದು, ಕರ್ನಾಟಕ ಸಂಭ್ರಮದ ಈ ಸಂದರ್ಭದಲ್ಲಿ ಕನ್ನಡದ ಬಳಕೆಯನ್ನು ಇನ್ನೂ ಹೆಚ್ಚಿಸಲು ನಾವೆಲ್ಲರೂ ಪ್ರಯತ್ನಿಸೋಣ ಎಂದರು. ನ್ಯಾಯದಾನ ತ್ವರಿತಗತಿಯಲ್ಲಿ ಆಗಬೇಕೆಂದರೆ ಗ್ರಾಮ ನ್ಯಾಯಾಲಯದ ಅವಶ್ಯಕತೆ ಇದೆ. 2008ರಲ್ಲಿಯೇ ಗ್ರಾಮ ನ್ಯಾಯಾಲಯದ ಕಾನೂನು ಜಾರಿಯಾಗಿದ್ದರೂ ಅದನ್ನು ಸರಿಯಾಗಿ ಅನುಷ್ಠಾನಗೊಳಿಸದಿರುವುದರಿಂದ ಗ್ರಾಮೀಣ ಜನತೆ ನ್ಯಾಯಕ್ಕಾಗಿ ಕಷ್ಟಪಡುವ ಸ್ಥಿತಿಇದೆ. ಆದ್ದರಿಂದ ರಾಜ್ಯ ಸರ್ಕಾರವು ಗ್ರಾಮ ನ್ಯಾಯಾಲಯದ ವ್ಯವಸ್ಥೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ ಗ್ರಾಮೀಣದ ಮನೆ ಬಾಗಿಲಿಗೆ ನ್ಯಾಯದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಕಾನೂನು ಸಚಿವರು ಹೇಳಿದರು.
ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯರು ಮತ್ತು ಮಾಜಿ ಅಧ್ಯಕ್ಷರಾದ ಜೆ.ಎಂ.ಅನಿಲ್ ಕುಮಾರ್ ಮಾತನಾಡಿ, ಬಳ್ಳಾರಿಯ ವಕೀಲರ ಸಂಘದ ಹಳೆಯ ಕಟ್ಟಡವನ್ನು ಬಳಸಿಕೊಂಡು ಬಳ್ಳಾರಿಯಲ್ಲಿ ಲಾ ಅಕಾಡಮಿಯನ್ನು ಪ್ರಾರಂಭಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹೈಕೋಟ್ ನ ಬಳ್ಳಾರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಅಶೋಕ್ ಎಸ್.ಕಿಣಗಿ, ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾಂಜಲಿ ದೇವಿ, ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯರಾದ ಕೆ.ಕೋಟೇಶ್ವರರಾವ್, ಮತ್ತಿತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ದೊಡ್ಡಬಸವ ಗವಾಯಿಗಳ ತಂಡದಿಂದ ನಾಡಗೀತೆ ಹಾಡಲಾಯಿತು, ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಕೆ.ಎಱ್ರೆಗೌಡ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ರವೀಂದ್ರನಾಥ್ ಕಾರ್ಯಕ್ರಮ ನಿರೂಪಿಸಿದರು.