ಶ್ರೀ ಶರಣ ಬಸವೇಶ್ವರ ಭಾವಚಿತ್ರ ಮೆರವಣಿಗೆ


ಬಂಕಾಪುರ, ಏ6: ತಾಲೂಕಿನ ಸದಾಶಿವಪೇಟೆ ಗ್ರಾಮದ ಶ್ರೀಶರಣ ಬಸವೇಶ್ವರರ 41ನೇ ವರ್ಷದ ಪುರಾಣ ಪ್ರವಚನ, ಸರ್ವ ಧರ್ಮ ಸಾಮೂಹಿಕ ವಿವಾಹ, ಜಾತ್ರೋತ್ಸವದ ಅಂಗವಾಗಿ ನಡೆದ ಶ್ರೀ ಶರಣ ಬಸವೇಶ್ವರರ ಭಾವಚಿತ್ರದ ಮೇರವಣಿಗೆಗೆ ಶ್ರೀಮಠದ ಶಿವದೇವ ಶರಣರು ಚಾಲನೆ ನೀಡಿದರು.
ಮೆರವಣಿಗೆ ಸಕಲ ವಾದ್ಯ ವೈಭವ, ಪೂರ್ಣ ಕುಂಭದೊಂದಿಗೆ ಮಹಿಳೆಯರು, ವೀರಗಾಸೆ ಪುರವಂತರ ಪೌರಾಣಿಕ ಶ್ರೀ ವೀರಭದ್ರದೇವರ ವಡಪುಗಳೊಂದಿಗೆ ಶ್ರೀಮಠದಿಂದ ಆರಂಭಗೊಂಡು ಸದಾಶಿವ ಪೇಟೆ, ನಾರಾಯಣಪುರ, ಮುನವಳ್ಳಿ ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಮೆರವಣಿಗೆಯನ್ನು ಭಕ್ತರು ಮನೆಯ ಅಂಗಳಕೆ ನೀರು ಚಿಮುಕಿಸಿ, ತಳಿರು ತೋರಣ ಕಟ್ಟಿ, ರಂಗೋಲಿ ಹಾಕಿ ಭವ್ಯವಾಗಿ ಬರಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶರಣ ಬಸವೇಶ್ವರರ ಭಾವಚಿತ್ರಕ್ಕೆ ಹೂಮಾಲೆ ಹಣ್ಣು ಕಾಯಿ ಸಮರ್ಪಿಸಿ ತಮ್ಮ ಭಕ್ತಿ ನಮನ ಸಲ್ಲಿಸಿದರು. ನಂತರ ಮೆರವಣಿಗೆ ಪುನಃ ಶ್ರೀಮಠ ತಲುಪಿತು.
ಇದಕ್ಕೂ ಪೂರ್ವದಲ್ಲಿ ಶ್ರೀ ಶರಣ ಬಸವೇಶ್ವರರಿಗೆ ಹಾಗೂ ಲಿಂ. ರೇವಣಸಿದ್ದೇಶ್ವರ ಶರಣರ ಗದ್ದುಗೆಗೆ ಮಹಾ ರುದ್ರಾಭಿಷೇಕ ಸಹಸ್ರ ಭಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ರಮೇಶ ಕಲಿವಾಳ, ಮುದಕಪ್ಪ ಮತ್ತಿಗಟ್ಟಿ, ಶಿವಬಸಯ್ಯ ಹೊಸಮಠ, ಮಹರುದ್ರಪ್ಪ ಕಿವುಡನವರ, ಮುತ್ತಣ್ಣ ಬಡಿಗೇರ, ಬಸಪ್ಪ ಶಿಗಟ್ಟಿ, ಕುರವತ್ತಿಗೌಡ್ರ, ಈರಣ್ಣ ಶೆಟ್ಟರ, ಪುಟ್ಟಪ್ಪ ಬಾಗಣ್ಣವರ, ಫಕ್ಕೀರಪ್ಪ ವಡವಿ, ಗುರುಲಿಂಗಯ್ಯ ನಂದಿಮಠ, ಈರಪ್ಪ ರವದಿ, ಶಂಕ್ರಪ್ಪ ಕಿವುಡನವರ, ಚನ್ನಪ್ಪ ಚಿಗರಿ, ಶಿವಮೂತ್ರ್ತೇಪ್ಪ ಹಿರೇಮಠ, ಚನ್ನಪ್ಪ ಬಿಜಾಪುರ, ಶಂಭು ಕಿವುಡನವರ, ಶೇಖಯ್ಯ ನಂದಿಮಠ, ಶಿವಶಂಕರಯ್ಯ ಮಹಾಂತಿನಮಠ, ಮಲ್ಲೇಶಪ್ಪ ನಿಡಗುಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.