ಶ್ರೀ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಜಿಲ್ಲಾಡಳಿತದಿಂದ ಗೋವುಗಳಿಗೆ ಪೂಜೆ

ಕಲಬುರಗಿ: ನ,05:ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಶು ಸೇವಾ ಮತ್ತು ಪಶು ವೈದ್ಯಕೀಯ ಹಾಗೂ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ವತಿಯಿಂದ
ಬಲಿಪಾಡ್ಯಮಿ ದಿನವಾದ ಇಂದು ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗೋಧೂಳಿ ಮುಹೂರ್ತ (ಸಂಧ್ಯಾಕಾಲ) ದಲ್ಲಿ ಗೋ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಶ್ರೀ ಶರಣ ಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ್ ದೇಶ್ ಮುಖ್ ಗೋವುಗಳಿಗೆ ಅರತಿ ಬೆಳಗಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಗೋವಿನ ಪೂಜೆ ಆರಂಭಿಸಿರುವ ರಾಜ್ಯ ಸರ್ಕಾರವನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಗೋವುಗಳಲ್ಲಿ ಮುಕ್ಕೋಟಿ ದೇವತೆಗಳಿದ್ದು, ಗೋವಿನ ಗಂಜಲ ಸೇರಿದಂತೆ ಅದರ ಉತ್ಪನ್ನಗಳಲ್ಲಿ ಆಯುರ್ವೇದ ಶಕ್ತಿ ಇದೆ ಎಂದು ಗೋಮಾತೆಯನ್ನು ವರ್ಣಿಸಿದರು.
ಪಶುವೈದ್ಯಕೀಯ ಮತ್ತು ಪಶುಸೇವಾ ಇಲಾಖೆಯ ಉಪನಿರ್ದೇಶಕ ಡಾ. ಬಿ.ಎಸ್. ಪಾಟೀಲ್ ಅವರು ಮಾತನಾಡಿ, ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಮಹತ್ವವನ್ನು ಜನತೆಗೆ ತಿಳಿಸಲಾಗುತ್ತದೆ. ಗೋವಿನ ಗಂಜಲದಲ್ಲಿ ಆಯುರ್ವೇದದ ಗುಣವಿರುವುದು ಸಾಬೀತಾಗಿದೆ. ಗೋವಿನ ಎಲ್ಲಾ ಉತ್ಪನ್ನಗಳನ್ನು ಬಳಸುವಂತೆ ಜನರಿಗೆ ಕರೆ ನೀಡಿದರು.
ಜಿಲ್ಲೆಯ 201 ಪಶು ಆಸ್ಪತ್ರೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗೋವುಗಳಿಗೆ ಪೂಜೆ ನೆರವೇರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕಲಬುರಗಿ ತಹಸೀಲ್ದಾರ್ ಪ್ರಕಾಶ್ ಕುದುರಿ ಅವರು ಮಾತನಾಡಿ ಕಲಬುರಗಿ ತಾಲ್ಲೂಕಿನಲ್ಲಿ
ಒಟ್ಟು 232 ಧಾರ್ಮಿಕ ಮತ್ತು ದತ್ತಿ ಇಲಾಖೆಯ ದೇಗುಲಗಳಲ್ಲಿ ಇಂದು ಗೋವುಗಳಿಗೆ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪಶು ಸಂಗೋಪನಾ ಸಚಿವಾಲಯದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಹುಣಚಿರಾಯ (ಕೇಶವ) ಮೋಟಗಿ, ಪಶು ವೈದ್ಯಕೀಯ ಮತ್ತು ಪಶುಸೇವಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಸುಭಾಶ್ ಟಕ್ಕಳಕಿ, ಮುಖ್ಯ ಪಶುವೈದ್ಯಾಧಿಕಾರಿ ಡಾ. ಯಲ್ಲಪ್ಪ ಇಂಗಳಿ, ಪಶು ವೈದ್ಯಾಧಿಕಾರಿ ಶರಣ ಬಸಪ್ಪ, ಸಂಸ್ಥಾನದ ಅಧಿಕಾರಿಗಳು ಮತ್ತು ಸಿಬ್ಬಂದಿ,
ಮುಜರಾಯಿ ಇಲಾಖೆಯ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.