ಶ್ರೀ ಶರಣಬಸವೇಶ್ವರರ ಸಂಸ್ಥಾನದಲ್ಲಿ ಮದುವೆಯ ಸಂಭ್ರಮಪುರಾಣದಲ್ಲಿ ಮಾತೆ ಮಹಾದೇವಿ ಶ್ರೀ ಶರಣಬಸವೇಶ್ವರರು ವಧುವರರು

ಕಲಬುರಗಿ.ಆ.4: ಮುಸ್ಸಂಜೆ ಹೊತ್ತು, ಜಿನುಗುವ ಮಳೆ, ಆಗಾಗ ಗುಡುಗು ಮಿಂಚಿನ ಶಬ್ದ, ಕೆಲವೊಮ್ಮೆ ರಭಸದಿಂದ ಹರಿಯುವ ಮಳೆಯ ಮಧ್ಯೆ, ಸಾವಿರಾರು ಭಕ್ತ ಸಾಗರ, ಶ್ರೀ ಶರಣಬಸವೇಶ್ವರರ ದೇವಸ್ಥಾನದಲ್ಲಿ ಕೈ ಮುಗಿದು ಶಿರಬಾಗಿ ಶರಣರ ನೆನೆಯುವ ರೀತಿ ಕಂಡರೆ ಶರಣಬಸವೇಶ್ವರರ ಪವಾಡ ಎಂತಹದ್ದು, ಎಂಬ ಭಾವ ಎಲ್ಲರಲ್ಲಿ ಮೂಡದೇ ಇರದು, ‘ಕಲಬುರಗಿಯ ಶರಣ’ ಎಂದೇ ಖ್ಯಾತಿ ಪಡೆದ ಶ್ರೀ ಶರಣಬಸವೇಶ್ವರರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸಂಭ್ರಮ ನೆಲೆ ನಿಂತಿದೆ.
ಶ್ರಾವಣ ಮಾಸದ ನಿಮಿತ್ತ ಪ್ರತಿ ದಿನ ಮುಸ್ಸಂಜೆಯಲ್ಲಿ ಶ್ರೀ ಶರಣಬಸವೇಶ್ವರರ ಪುರಾಣ ಕೇಳಲು ಭಕ್ತ ಸಾಗರ ಹರಿದು ಬರುತ್ತಿದೆ. ಬರುವ ಭಕ್ತಾದಿಗಳ ಸುವ್ಯವಸ್ಥಿತ ಆಸನದ ವ್ಯವಸ್ಥೆ, ದಾಸೋಹ ವ್ಯವಸ್ಥೆ ಹಾಗೂ ಸೇವೆ ಸಲ್ಲಿಸುವ ಹಲವಾರು ಕಲಾವಿದರಿಗೆ ಅವಕಾಶ ನೀಡುತ್ತಿರುವ ವೇದಿಕೆಯಾಗಿದೆ.
18ನೇ ಶತಮಾನದ ಪುಣ್ಯ ಪುರುಷ ಶ್ರೀ ಶರಣಬಸವೇಶ್ವರರ ಪುರಾಣದಲ್ಲಿ ಮಂಗಳವಾರ ‘ಮದುವೆಯ ದಿನವಾಗಿತ್ತು. ಮಾಶ್ಯಾಳ ಗ್ರಾಮದ ಭಾವಿಮನೆತನದ ಶಾಂತಲಿಗಪ್ಪರ ಕಿರಿಯ ಮಗಳು ಮಹಾದೇವಿ ಸತಿಯಾಗಿ ಶ್ರೀ ಶರಣಬಸವೇಶ್ವರರಿಗೆ ಕೈ ಹಿಡಿದಿರುವ ಪುಣ್ಯದಿನವಾಗಿದೆ. ದೈವ ಮೆಚ್ಚಿದ ಜೋಡಿ ಭೂಲೋಕಕ್ಕೆ ಮಾದರಿಯಾಗಿ ನಿಂತ ಪರಿಯನ್ನು ಈ ಲೋಕದ ಅರಿವಿಗೆ ತರುವ ಪ್ರಯತ್ನ ಇದಾಗಿದೆ.
ಹೀಗಾಗಿ ಪ್ರತಿ ವರ್ಷ ಪುರಾಣದಲ್ಲಿ ಬರುವ ಶ್ರೀ ಶರಣಬಸವೇಶ್ವರರ ಮದುವೆಯ ದಿನವನ್ನು ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಯಾದ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ಹಾಗೂ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವನವರು ಅದ್ಧೂರಿಯಾಗಿ ಆಚರಿಸುತ್ತಿರುವದು ಇನ್ನೂ ವಿಶೇಷವಾಗಿದೆ.
ಹೊಸ ಸೀರೆ, ಹಸಿರು ಬಳೆ, ಮುಡಿಗೆ ಹೂ ಮುತ್ತೈದೆರೆಲ್ಲರೂ ಸಂಭಮ್ರದಿಂದ ಓಡಾಡುತ್ತ, ಶ್ರೀ ಶರಣಬಸವೇಶ್ವರರ ಹಾಗೂ ಮಹಾದೇವಿ ಮಾತೆಯ ಪ್ರತಿಮೆಗೆ ಅರಿಶಿಣ ಹಚ್ಚುವದು, ಎಣ್ಣೆ ಹಚ್ಚುವದು ಹಾಗೂ ಅಕ್ಷತೆ ಹಾಕುವದು ಹೀಗೆ ಇತರೆ ಪದ್ಧತಿಗಳನ್ನು ಮದುವೆಯ ದಿನದ ಪ್ರತಿ ನಿಯಮಗಳನ್ನು ಇಲ್ಲಿ ಮಾಡಲಾಗುತ್ತದೆ. ಇಂತಹ ಹಲವಾರು ಸಂಪ್ರದಾಯಗಳನ್ನು ಆಚರಣೆಗೆ ತರುವ ಮೂಲಕ ನಮ್ಮ ಸಂಸ್ಕøತಿ ಇನ್ನು ಜೀವಂತಗೊಳಿಸುತ್ತಿದೆ ಈ ಸಂಸ್ಥಾನ.
ಇದರ ಆಚರಣೆ ಉದ್ದೇಶ ಕಲಿಯುಗದಲ್ಲಿ ಸತಿ ಪತಿಗಳ ಜೀವನ ಕ್ಷುಲಕ್ಕ ಕಾರಣಗಳಿಗಾಗಿ ಹರಿದು ಹೊಗುತ್ತಿವೆ. ಈ ಮಹಾತ್ಮರ ದಿವ್ಯ ಜೀವನ ಆಚರಿಸುವ ಮೂಲಕ ಈ ಸಮಾಜಕ್ಕೆ ದಾಂಪತ್ಯ ಜೀವನದ ರೀತಿ ನೀತಿ ಮನದಟ್ಟು ಮಾಡುವ ಅಂಶಗಳನ್ನು ಒಳಗೊಂಡಿದೆ.