ಶ್ರೀ ವೀರಭದ್ರೇಶ್ವರ ಸ್ವಾಮಿಯ ಗಂಗೆಸ್ಥಳ ಪೂಜೆ


ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ.4. ಶ್ರಾವಣ ಮಾಸದ 3ನೇ ಹೊಳೆಗೆ ಹೋಗುವ ಪವಿತ್ರ ಸೋಮವಾರದ ಪ್ರಯುಕ್ತ, ಸಿರಿಗೇರಿ ಗ್ರಾಮದ ಪ್ರಮುಖ ದೇವರಾದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗಂಗಸ್ಥಳದ ಪೂಜೆಯು ಭಕ್ತಿ ಸಂಬ್ರಮದಿಂದ ನಡೆಯಿತು. ಗ್ರಾಮದ ಭಕ್ತರು, ವೀರಶೈವ ಸಮಿತಿ ಮುಖಂಡರು ಬೆಳಗಿನ ಜಾವದಲ್ಲಿ ಗಂಗೆಸ್ಥಳಕ್ಕೆ ಹೋಗಿ ಸ್ವಾಮಿಯ ಮೂರ್ತಿಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಿ ನಂತರ ಗ್ರಾಮದ ಶ್ರೀನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀಗಣೇಶ ಕಟ್ಟೆ ಹತ್ತಿರ ಗಂತೆಯ ತನುಬಿಂದಿಗೆ ಇಟ್ಟು, ವಿಘ್ನೇಶ್ವರನಿಗೆ ಪೂಜೆ ನೆರವೇರಿಸಿದರು. ಇದೇವೇಳೆ ಶ್ರೀವೀರಭದ್ರೇಶ್ವರಸ್ವಾಮಿಯ ಒಡವು ಹೇಳಿದ ಶ್ರೀಬಸಯ್ಯಸ್ವಾಮಿ ತಿಮ್ಮಲಾಪುರ ಇವರು ಹರಕೆ ಹೊತ್ತ ಭಕ್ತರಿಗೆ ಬಾಯಿಯಲ್ಲಿ ತಂತಿಯಕಡ್ಡಿ ಸೇರಿಸಿ, ವೀರಭದ್ರೇಶ್ವರಸ್ವಾಮಿಯ ಪ್ರತಾಪದ, ಪವಾಡಗಳ ಒಡವುಗಳನ್ನು ಹೇಳಿದರು. ನಂತರ ತನುಬಿಂದಿಗೆ ಮೆರವಣಿಗೆ ಸಾಗಿ, ಮುಖ್ಯವೃತ್ತದಲ್ಲಿ ಶಾಂತಮೂರ್ತಿಸ್ವಾಮಿ ಇವರು 101 ಗಂಟಿನ ದಾರವನ್ನು ದವಡೆಯ ರಂದ್ರದಲ್ಲಿ ಎಳೆದು ಸ್ವಾಮಿಗೆ ಹರಕೆ ತೀರಿಸಿದರು. ಶ್ರೀಬಸಯ್ಯಸ್ವಾಮಿಯವರ ತಂಡದವರು ತಾಸಿಮದ್ದಳೆ ಮತ್ತು ಸ್ಥಳೀಯ ವಾದ್ಯ ತಂಡದವರಿಂದ ಮೇಳವಾಧ್ಯಗಳೊಂದಿಗೆ ಸಾಗಿದೆ ಮೆರವಣಿಗೆಯಲ್ಲಿ ಯುವಕರು ನಂದಿಕೋಲುಗಳನ್ನು ಹೊತ್ತು ಕುಣಿದರು. ಮಹಿಳೆಯರು ಕಳಸ ಹಿಡಿದು ಸಾಗಿದರು. ನಂತರ ಧರ್ಮವಂತರ ಬಾವಿ ಹತ್ತಿರವಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತನುಬಿಂದಿಗೆಯ ಗಂಗೆಜಲದಿಂದ ಸ್ವಾಮಿಗೆ ವಿಶೇಷ ಅಭಿಷೇಕ ನಡೆಸಿ ಶ್ರಾವಣಮಾಸದ ಪೂಜೆ ವಿಧಾನಗಳನ್ನು ಭಕ್ತಿಯಿಂದ ನೆರವೇರಿಸಲಾಯಿತು. ಶ್ರೀನಾಗನಾಥೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಬಿ.ಅಮರೇಶಗೌಡ, ಹೊಳಗುಂದೆ ಶಿವಯ್ಯಸ್ವಾಮಿ, ಹನುಮಂತಗೌಡ, ವಸ್ತ್ರದಮಂಜುನಾಥ, ಜೆಎಚ್‍ವಿ ವಿರುಪಾಕ್ಷಗೌಡ, ಮನೆಹಿಂದಲ ಕೊಮಾರೆಪ್ಪನವರಮಂಜು, ಸಣ್ಣೆಪ್ಪಗೌಡ, ಶಶಿಕುಮಾರ, ಬುಜ್ಜಿಗೌಡ, ಟಿ.ಶರಣಪ್ಪ, ವೀರೇಶಸ್ವಾಮಿ, ಹಳೆಮನೆಬಸವ, ಸೂರಿ, ಕುಬೇರ, ನಾಗರಾಜ, ಶಿವಪ್ರಕಾಶ, ಚನ್ನನಗೌಡ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

One attachment • Scanned by Gmail