ಶ್ರೀ ವೀರಭದ್ರೇಶ್ವರ ಮೂರ್ತಿ ಪುನರ್ ಪ್ರತಿಷ್ಠಾಪನೆ- ದೇವಸ್ಥಾನಗಳು ಧರ್ಮ ಮಾರ್ಗ ತೋರುವ ದೀವಿಗೆಗಳು : ನೀಲಗಲ್ ಶ್ರೀ

ಸಿರವಾರ,ಸೆ.೧೨- ದೇವಸ್ಥಾನಗಳು ಶ್ರದ್ಧೆ, ಭಕ್ತಿ, ಧರ್ಮ ಮಾರ್ಗ ತೋರುವ ದೀವಿಗೆ ಮತ್ತು ಶಕ್ತಿ ಕೇಂದ್ರಗಳಾಗಿವೆ. ನ್ಯಾಯ, ನೀತಿ, ಧರ್ಮ, ಕಾಯಕದಿಂದ ಕೂಡಿದ ಭಕ್ತಿಯ ಸೇವೆ ಸಮಾಜದಲ್ಲಿ ಅನ್ಯೋನ್ಯ ಬಾಂಧವ್ಯ ಮೂಡಿಸುತ್ತದೆ ಎಂದು ನೀಲಗಲ್ ಬೃಹನ್ಮಠದ ಡಾ. ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀರಾಮನಗರದ ಪಂಚಲಿಂಗ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರೀ ವೀರಭದ್ರೇಶ್ವರ ಮೂರ್ತಿ ಮತ್ತು ಬಸವಣ್ಣ ಮೂರ್ತಿ ಪುನರ್ ಪ್ರತಿಷ್ಠಾಪಿಸಿ ಮಾತನಾಡಿದರು.
ದೇವರ ಮೂರ್ತಿಗಳು ಮುಕ್ಕಾದ ಕಾರಣ ನೂತನ ಮೂರ್ತಿಗಳನ್ನು ಮರು ಪ್ರತಿಷ್ಠಾಪನೆ ಮಾಡಿರುವುದು ನಗರದ ಶಾಂತಿ, ಸಮೃದ್ದಿ ಸಂಪತ್ತು ಹೆಚ್ಚಲು ಸಹಕಾರವಾಗಲಿದೆ ಎಂದರು.
ಮೂರ್ತಿಗಳ ಪುನರ್ ಪ್ರತಿಷ್ಠಾಪನೆಗೂ ಪೂರ್ವದಲ್ಲಿ ವಿವಿಧ ವಾದ್ಯಮೇಳಗೊಂದಿಗೆ ಹಾಗೂ ಪೂರ್ಣಕುಂಭ ಮೇಳದೊಂದಿಗೆ ದೇವರ ಮೂರ್ತಿ ಮೆರವಣಿಗೆ ಆರಂಭಗೊಂಡು, ನಂತರ ವಿಶೇಷ ಪೂಜೆ, ಹೋಮ-ಹವನ ಕಾರ್ಯಕ್ರಮಗಳು ನಡೆದವು.
ಈ ವೇಳೆ ಶ್ರೀರಾಮನಗರದ ಭಕ್ತರು ಮತ್ತು ಪಟ್ಟಣದ ಗಣ್ಯರು, ಮಹಿಳೆಯರು ಮಕ್ಕಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.