
ಇಂಡಿ:ಮೇ.19:ತಾಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಆರಾದ್ಯ ದೇವ ಶ್ರೀ ವೀರಭದ್ರೇಶ್ವ ದೇವರ ನೂತನ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ ಭಕ್ತರು ಸ್ವಾಗತಿಸಿ ಸಂಭ್ರಮಿಸಿದರು.
ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠದಿಂದ ಅಲಂಕೃತ ಎತ್ತಿನ ಬಂಡಿಯಲ್ಲಿ ಆರಂಭವಾದ ಈ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಯಲ್ಲಿ ವಿಬೃಂಭಣೆಯಿಂದ ಜರುಗಿತು. ಸಂಬಾಳ ವಾದ್ಯ ಮೇಳದೊಂದಿಗೆ ನಡೆದ ಈ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಪೂರ್ಣ ಕುಂಭದೊಂದಿಗೆ ಭಾಗವಹಿಸಿ ಮೆರವಣಿಗೆಗೆ ಮೆರಗು ತಂದರು. ಜೈಕಾರ ಹಾಕಿದರು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮೆರವಣಿಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನ ತಲುಪಿದ ಬಳಿಕ ಉತ್ಸವ ಮೂರ್ತಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಭಕ್ತರೆಲ್ಲರೂ ಒಗ್ಗೂಡಿ ರುದ್ರಾಭಿಷೇಕ ನೆರವೇರಿಸಿದರು. ಇದಕ್ಕೂ ಮುನ್ನ ದೇವಸ್ಥಾನದಲ್ಲಿ ಭಕ್ತರಿಂದ ಬೆಳಿಗ್ಗೆ ವಿಶೇಷ ಪೂಜಾ ಕೈಂಕರ್ಯ ಜರುಗಿದವು.
ಸದ್ಭಕ್ತರಾದ ಗೌರಿಶಂಕರ ಬಾಬುಳಗಾಂವ ಮಾತನಾಡಿ, ಶ್ರೀ ವೀರಭದ್ರ ಉತ್ಸವ ಮೂರ್ತಿ ಇರಲಿಲ್ಲ. ಇದೇ ಪ್ರಥಮ ಬಾರಿಗೆ ದೇವಸ್ಥಾನದ ಅರ್ಚಕ ಮಾಂತಯ್ಯ ದಾನಯ್ಯ ಹಿರೇಮಠ ತಮ್ಮ ಸ್ವಂತ ಖರ್ಚಿನಲ್ಲಿ ಸುಂದರ ಉತ್ಸವ ಮೂರ್ತಿ ಮಾಡಿಸಿ ಹೊತ್ತ ಹರಕೆಯಂತೆ ಭಕ್ತಿ ಸೇವೆ ಸಮರ್ಪಿಸಿರುವದು. ಉತ್ಸವ ಮೂರ್ತಿ ಮೆರವಣಿಗೆಗೆ ಅಗತ್ಯವಾದ ಪಾಲಕಿಯನ್ನು ಬಸವರಾಜ ಮಲ್ಲಪ್ಪ ಲಾಳಸೇರಿ ಮನೆತನದವರು ಸ್ವಂತ ಖರ್ಚಿನಲ್ಲಿ ಮಾಡಿಸಿ ದೇವಸ್ಥಾನಕ್ಕೆ ನೀಡಿರುವದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ ಎಂದರು.
ವೇದಮೂರ್ತಿ ಗುರುಬಾಳಯ್ಯ ಹಿರೇಮಠ, ಮಾಂತಯ್ಯ ಹಿರೇಮಠ, ಈರಯ್ಯ ಹಿರೇಮಠ, ಮುರುಗಯ್ಯ ಹಿರೇಮಠ, ಮರುಗಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಸಿದ್ದು ಮುಜಗೊಂಡ, ಸಂಕಪ್ಪಗೌಡ ಬಿರಾದಾರ, ಧನರಾಜ ಮುಜಗೊಂಡ, ರಾಜಶೇಖರ ಕಾರಾಜಿಣಗಿ, ವಿಠ್ಠಲ ಬಾಬುಳಗಿ, ಸಿದ್ದಾರಾಮ ಲಚ್ಯಾಣ, ವಿಠ್ಠಲ ಚೋರಗಿ, ಬಸವರಾಜ ಲಾಳಸೇರಿ ಮತ್ತಿತರಿದ್ದರು.