ಶ್ರೀ ವಿದ್ಯಾ ಮಹಾಸಂಸ್ಥಾನ ಕಟ್ಟಡದ ಉದ್ಘಾಟನೆ ಶ್ರೀಚಕ್ರ ಮಹಾ ಮೇರು ಪ್ರಾಣ ಪ್ರತಿಷ್ಠಾಪನೆ

ಆನೇಕಲ್. ಫೆ. ೧೫- ಹಾರಗದ್ದೆ ಗ್ರಾಮದಲ್ಲಿ ಶ್ರೀ ವಿದ್ಯಾ ಮಹಾಸಂಸ್ಥಾನ ಕಟ್ಟಡದ ಉದ್ಘಾಟನೆ ಹಾಗೂ ಶ್ರೀಚಕ್ರ ಮಹಾ ಮೇರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನಡೆಯಿತು.
ಶ್ರೀ ಆತ್ಮಾನಂದನಾಧರವರು ಮಾತನಾಡಿ, ಹಾರಗದ್ದೆ ಗ್ರಾಮವು ನನ್ನ ಹುಟ್ಟೂರಾಗಿದ್ದು ಅಮ್ಮನವರ ಕೃಪೆ ಆಶೀರ್ವಾದದಿಂದ ಬುಧವಾರ ರಾಜರಾಜೇಶ್ವರಿ ಶ್ರೀಚಕ್ರ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ ಸರ್ವರಿಗೂ ಅಮ್ಮನವರು ಒಳಿತನ್ನು ಮಾಡಲಿದ್ದಾರೆ, ಶ್ರೀ ವಿದ್ಯಾ ಮಹಾಸಂಸ್ಥಾನಕ್ಕೆ ದೇಶ ವಿದೇಶಗಳಲ್ಲಿ ಅಪಾರಭಕ್ತ ವೃಂದ ವಿದ್ದು ಗ್ರಾಮದ ಹೆಸರು ಇನ್ನಷ್ಟು ಉತ್ತುಂಗಕ್ಕೆ ಹೋಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.ನಮ್ಮ ಸನಾತನ ಧರ್ಮವನ್ನು ಪಾಲಿಸಿದರೆ ಬಹಳಷ್ಟು ಅಭಿವೃದ್ಧಿಯನ್ನು ಹೊಂದುತ್ತೇವೆ ಅದನ್ನು ಅರಿತು ನಾವು ಎಲ್ಲರಿಗೂ ಒಳ್ಳೆದ್ದನ್ನು ಬಯಸಿ ಒಳಿತನ್ನು ಮಾಡಿದಾಗ ಜಗತ್ತಿಗೆ ಏನನ್ನಾದರೂ ಒಂದು ಸಂದೇಶ ರವಾನೆ ಮಾಡಬಹುದಾಗಿದೆ ಎಂದರು.
ಹಾರಗದ್ದೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್. ನಟರಾಜು ಮಾತನಾಡಿ, ಶ್ರೀ ವಿದ್ಯಾ ಮಹಾ ಸಂಸ್ಥಾನ ಅಧ್ಯಕ್ಷರು ಅವರ ಕುಟುಂಬದವರು ನಮ್ಮ ಗ್ರಾಮದಲ್ಲೇ ಹುಟ್ಟಿ ಬೆಳೆದಿದ್ದು ಬಹಳಷ್ಟು ವರ್ಷಗಳ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು ಆದರೆ ಈಗ ಅಮ್ಮನವರ ಕೃಪಾ ಕಟಾಕ್ಷದಿಂದ ಇಲ್ಲಿ ರಾಜರಾಜೇಶ್ವರಿ ಅಮ್ಮನವರ ಕಟ್ಟಡ ಮತ್ತು ಶ್ರೀಚಕ್ರ ಪ್ರತಿಷ್ಠಾಪನೆ ಮಾಡಲಾಗಿದೆ, ಗ್ರಾಮದ ಜನರು ಇನ್ನಷ್ಟು ಸಮೃದ್ಧಿಯಾಗಿ ನೆಮ್ಮದಿಯಿಂದ ಜೀವನ ನಡೆಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳು, ಪ್ರತಿಷ್ಠಾನದ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.