ಶ್ರೀ ರೇಣುಕಾಚಾರ್ಯ ಜಯಂತಿ: ಸಾಮೂಹಿಕ ವಿವಾಹ ಕಾರ್ಯಕ್ರಮ

ಸವಣೂರ, ಮಾ27: ಜಗದಾದಿ ಜಗದ್ಗುರು ರೇಣುಕರ ಜಯಂತಿ ದಿನದಂದು ಗೃಹಸ್ಥಾಶ್ರಮ ಪಾದಾರ್ಪಣೆ ಮಾಡುತ್ತಿರುವ ನವ ವಧು-ವರರು ಭಾಗ್ಯಶಾಲಿಗಳೆಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ನಗರದ ರೇಣುಕಾಚಾರ್ಯ ನಗರದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಸಾಮೂಹಿಕ ವಿವಾಹ ಮತ್ತು ಜನಜಾಗೃತಿ ಧರ್ಮ ಸಭೆಯ ದಿವ್ಯ ಸಾನಿಧ್ಯ ವಹಿಸಿ ನವ ವಧುವರರಿಗೆ ಮಂಗಲಾಕ್ಷತೆ ಕೈಗೊಂಡು ಆಶೀರ್ವಚನ ನೀಡಿದರು.
ರೇಣುಕರ ಜಯಂತಿ ಸಮಾಜಮುಖಿಯನ್ನಾಗಿಸುವ ನಿಟ್ಟಿನಲ್ಲಿ ಸೇವಾ ಸಮಿತಿಯವರು ಸಾಮೂಹಿಕ ವಿವಾಹಗಳನ್ನು ಕೈಗೊಳ್ಳುವ ಮೂಲಕ ಸೂಕ್ತ ನಿರ್ಧಾರ ಕೈಗೊಂಡು ಬಡವರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಮುಂಬರುವ ದಿನಮಾನಗಳಲ್ಲಿ ಆಗರ್ಭಶ್ರೀಮಂತರು ಕೂಡ ಸಾಮಹಿಕ ವಿವಾಹಗಳಲ್ಲಿ ತಮ್ಮ ಮಕ್ಕಳ ಮದುವೆ ಮಾಡಲು ಮನಸ್ಸು ಮಾಡಲು ಆಹ್ವಾನ ನೀಡಿದರು.
ಸಾಮೂಹಿಕ ವಿವಾಹಗಳು ಬಡವರ ವಿವಾಹಗಳಲ್ಲ ಭಾಗ್ಯವಂತರ ವಿವಾಹಗಳು. ಗೃಹಸ್ಥಾಶ್ರಮ ಅನ್ಯ ಆಶ್ರಮಗಳಿಗಿಂತಲೂ ಶ್ರೇóಷ್ಠವಾಗಿದ್ದು ಜಗತ್ತಿಗೆ ವಿಜ್ಞಾನಿಗಳನ್ನು, ತಪಸ್ವಿಗಳನ್ನು, ಶಿವಯೋಗಿಗಳನ್ನು, ಕರುಣಿಸಿದ್ದು ಗೃಹಸ್ಥಾಶ್ರಮ, ಆ ಪರಮಾತ್ಮನು ಸಹ ಮಾನವನಾಗಿ ಅವತರಿಸಿ ಧರೆಗೆ ಬರಲು ಅವಕಾಶ ಕಲ್ಪಿಸಿಕೊಡುವುದು ಗೃಹಸ್ಥಾಶ್ರಮವಾಗಿದೆ. ಇದನ್ನರಿತು ನವ ದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ಧ ಮನೋಭಾವದೊಂದಿಗೆ, ಸಾಮರಸ್ಯದಿಂದ ಜೀವನ ನಡೆಸಿದಲ್ಲಿ ಗೃಹಸ್ಥಾಶ್ರಮ ಸ್ವರ್ಗಕ್ಕಿಂತಲೂ ಶ್ರೇಷ್ಠವಾಗಲಿದೆ ಎಂದು ನವ ವಧು ವರರಿಗೆ ಮಂಗಲಾರ್ಶೀವಾದ ಕರುಣಿಸಿದರು.
ಸಾನಿಧ್ಯ ವಹಿಸಿದ್ದ, ಹಿರೆಮಣಕಟ್ಟಿಯ ವಿಶ್ವರಾಧ್ಯ ಶಿವಾಚಾರ್ಯರು, ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು, ಉಪದೇಶಾಮೃತ ನೀಡಿದರು.
ರೇಣುಕ ಮಂದಿರದ ಗೌರವಾಧ್ಯಕ್ಷ ಮಹೇಶ ಸಾಲಿಮಠ ಮಾಜಿ ವಿ. ಪ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿದರು.ರೇಣುಕ ಮಂದಿರದ ಅಧ್ಯಕ್ಷ ರವತಪ್ಪ ಬಿಕ್ಕಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಿ.ಬಿ ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ, ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಎಂ ಪಾಟೀಲ, ಗಣ್ಯ ವರ್ತಕರಾದ ಪುಟ್ಟಯ್ಯ ಕಲ್ಮಠ, ಸುಬಾಸ ಗಡೆಪ್ಪನವರ, ರಾಜಶೇಖರ ಮೆಣಸಿನಕಾಯಿ, ಪುರಸಭೆ ಅಧ್ಯಕ್ಷೆ ಶೈಲಾ ಮುದಿಗೌಡ್ರ, ಸದಸ್ಯೆ ರೇಖಾ ಬಂಕಾಪೂರ, ಧರ್ಮಾಭಿಮಾನಿ ಈರಣ್ಣ ಬಾಳಿಕಾಯಿ ಮುಖಂಡ ಉಮೇಶ ಕಳಕಪ್ಪನವರ ಉಪಸ್ಥಿತರಿದ್ದರು. ಶಿಕ್ಷಕ ಬಸವರಾಜ ಚಳ್ಳಾಳ ನಿರ್ವಹಿಸಿದರು.

ಶ್ರೀಶೈಲ ಜಗದ್ಗುರುಗಳ ದಿವ್ಯ ಸಾನಿಧ್ಯ ಹಾಗೂ ವಿವಿಧ ಮಠಾಧೀಶರ ಸಮ್ಮುಖದಲ್ಲಿ ವೇ.ಮೂ ಗಂಗಾಧರಯ್ಯ ಶಾಸ್ತ್ರಿಗಳು ಸಾಲಿಮಠ ಅವರ ನೇತೃತ್ವದೊಂದಿಗೆ ಬೆಳಗ್ಗೆ 11-55ಕ್ಕೆ ಸಂದ ಅಭಿಜಿನ್ ಲಗ್ನದ ಶುಭ ಮಹೂರ್ತದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 8 ಜೋಡಿ ನವ ವಧು ವರರು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.