ಶ್ರೀ ರೇಣುಕಾಚಾರ್ಯರ ಜಯಂತಿ ಆಚರಣೆ ಅಚ್ಚುಕಟ್ಟಾಗಿರಲಿ- ಎ.ಡಿ.ಸಿ

ರಾಯಚೂರು,ಮಾ.೦೩- ಸರ್ಕಾರದಿಂದ ಮೊದಲ ಬಾರಿಗೆ ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಮಾ.೦೫ರಂದು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುತ್ತದೆ. ಜಯಂತಿ ಆಚರಣೆಗೆ ಬೇಕಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮಾ.೦೩ರ(ಗುರುವಾರ) ನಗರದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಂವಾದ ಕೊಠಡಿಯಲ್ಲಿ ಶ್ರೀರೇಣುಕಾಚಾರ್ಯ ಜಯಂತಿ ಹಾಗೂ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಆಚರಣೆ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾ.೦೫ರಂದು ನಗರದ ಲಿಂಗಸುಗೂರು ರಸ್ತೆಯ ಬೈಪಾಸ್ ವೃತ್ತದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಅಲ್ಲಿಂದ ಮೆರವಣಿಗೆ ಮೂಲಕ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ಜರುಗುವುದು ಎಂದು ತಿಳಿಸಿದರು.
ರೇಣುಕಾಚಾರ್ಯರ ಜಯಂತಿಯನ್ನು ಸರ್ಕಾರದಿಂದ ಮೊದಲ ಬಾರಿಗೆ ಆಚರಣೆ ಮಾಡುತ್ತಿದ್ದು, ಜಯಂತಿ ಆಚರಣೆ ಅಚ್ಚುಕಟ್ಟಾಗಿರಬೇಕು ಹಾಗೂ ಯಾವುದೇ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕು. ಎಂದು ತಿಳಿಸಿದರು.
ಅದೇ ರೀತಿ ಮಾ.೦೭ರಂದು ಯೋಗಿ ನಾರೇಯಣಾ ಯತೀಂದ್ರರ(ಕೈವಾರ ತಾತಯ್ಯ) ಅವರ ಜಯಂತಿಯನ್ನು ನಗರದ ಕನ್ನಡ ಭವನದಲ್ಲಿ ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ವೀರಶೈವ ಸಮಾಜದ ಮುಖಂಡರಾದ ಶರಣಬೂಪಾಲ ನಾಡಗೌಡ, ಕಲ್ಲಯ್ಯ ಸ್ವಾಮಿ, ಶರಣರೆಡ್ಡಿ, ಪ್ರಭು ಶಾಸ್ತ್ರಿ, ಶರಣಯ್ಯ ಸ್ವಾಮಿ, ವಿಎಸ್ ಹಿರೆಮಠ, ವೀರಯ್ಯ ಸ್ವಾಮಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.