ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ: ಧರ್ಮಸಭೆ

ಲಕ್ಷ್ಮೇಶ್ವರ,ಮಾ14: ಮಹಿಳೆಯರು, ದೀನ ದುರ್ಬಲರು ಹಾಗೂ ಬಡವರ ನೋವನ್ನು ನಿವಾರಿಸಿ ಕರ್ಮವನ್ನು ಕಿತ್ತು- ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕಾರಣ್ಯಸಿಂಧು ರೇಣುಕಾಚಾರ್ಯರು ಪ್ರಾಚೀನ ಕಾಲದಲ್ಲಿಯೇ ಸಮಾನತೆಯನ್ನು ಸಾರಿ ವಿಶ್ವ ಮಾನವರಾಗಿದ್ದಾರೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಪಟ್ಟಣದ ಶ್ರೀ.ಜ.ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ನಡೆದ ಜ.ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ನಿಮಿತ್ತದ ಧರ್ಮಸಭೆಯಲ್ಲಿ ಮಾತನಾಡಿ, ಬದುಕಿನ ಶ್ರೇಯಸ್ಸಿಗೆ ಸತ್ಯ, ಅಹಿಂಸೆ, ಆಸ್ತೆಯ, ಬ್ರಹ್ಮಚರ್ಯ, ದಯಾ, ಕ್ಷಮಾ, ಧಾನ, ಪೂಜಾ, ಜಪ, ಧ್ಯಾನ ಎಂಬ ದಶವಿಧ ಧರ್ಮ ಸೂತ್ರಗಳು ಮತ್ತು ಮಾನವೀಯತೆಯ ಆದರ್ಶ ಚಿಂತನಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿದೀಪವಾಗಿವೆ. ವಿಜ್ಞಾನ ಎμÉ್ಟೀ ಬೆಳೆದರೂ ಮನುಷ್ಯನಿಗೆ ಮಾನಸಿಕ ನೆಮ್ಮದಿಗೆ ಧರ್ಮ, ಸಂಸ್ಕಾರ ಅಗತ್ಯ. ಈ ಮಾನವ ಕುಲಕೋಟಿಗೆ ಧರ್ಮ-ಸಂಸ್ಕಾರ ನೀಡಿ, ವಿಶ್ವ ಬಂಧುತ್ವ ಸಾರಿ ವೀರಶೈವ ಧರ್ಮದಲ್ಲಿ ಧಾರ್ಮಿಕ, ಸಾಮಾಜಿಕ ಮೌಲ್ಯಗಳನ್ನು ಬಿತ್ತಿದ ಕೀರ್ತಿ ಜ.ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.
ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ಆದಿ ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಆಚರಣೆ ಪರಂಪರೆಗೆ ಲಿಂ.ಜ. ವೀರಗಂಗಾಧರರು ಮುನ್ನುಡಿ ಬರೆದಿದ್ದಾರೆ. ಸಮಾಜವನ್ನು ಧರ್ಮ ಮಾರ್ಗದಲ್ಲಿ ನಡೆಸುವಲ್ಲಿ ವೀರಶೈವ ಸಮಾಜದ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ, ಆರ್ಥಿಕವಾಗಿ ನಾವೆಷ್ಟೇ ಶ್ರೀಮಂತಿಕೆ ಹೊಂದಿದ್ದರೂ ಮನದ ಶಾಂತಿ ನೆಮ್ಮದಿಗಾಗಿ ದೇವರು, ಧರ್ಮ, ಧ್ಯಾನ,ಪೂಜೆ ಅವಶ್ಯಕ. ವೀರಶೈವ ಧರ್ಮದ ಪವಿತ್ರ ಗ್ರಂಥವಾದ ಸಿದ್ಧಾಂತ ಶಿಖಾಮಣಿಯನ್ನು ಪ್ರತಿಯೊಬ್ಬರೂ ಅರಿತು ಇಷ್ಟಲಿಂಗ ಪೂಜೆ ಹಾಗೂ ಆಚಾರಗಳನ್ನು ರೂಡಿಸಿಕೊಂಡು ನಮ್ಮ ಧರ್ಮ ಪರಂಪರೆಗಳನ್ನು ಕಾಪಾಡಿಕೊಂಡು ಎಲ್ಲರೂ ಅಖಂಡತೆಯಿಂದ ಕೂಡಿ ಬಾಳಬೇಕೆಂದು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಲಿಂ.ವೀರಗಂಗಾಧರ ಜಗದ್ಗುರುಗಳ ದಿವ್ಯವಾಣ ಜಾಗತಿಕ ಶಾಂತಿ ಸಂದೇಶವೇ ಆಗಿದೆ. ಪಾಲಕರು ಮಕ್ಕಳಿಗೆ ಧರ್ಮ, ಸಂಸ್ಕಾರ, ಪರಂಪರೆ-ಆಚರಣೆ, ಪದ್ಧತಿಗಳ ಬಗ್ಗೆ ತಿಳಿಸಬೇಕು ಎಂದರು.
ಪಟ್ಟಣದ ಕರೇವಾಡಿಮಠದ ಶ್ರೀ ಮಳೇಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿದರು.
“ವೀರಶೈವ ಧರ್ಮದ ಏಳಿಗೆಗಾಗಿ ಪಂಚಪೀಠಗಳು ಒಂದಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಜನರು ಧರ್ಮದಿಂದ ವಿಮುಖರಾಗಿ ಪೀಠ ಪರಂಪರೆಯಿಂದ ಅಂತರ ಕಾಯ್ದುಕೊಂಡಾರು” ಎಂದು ಮಾಜಿ ಶಾಸಕ ಜಿ.ಎಂ ಮಹಾಂತಶೆಟ್ಟರ ಹೇಳಿದ್ದಾರೆ. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಸೋಮಣ್ಣ ಮುಳಗುಂದ ಮಾತನಾಡಿದರು. ಚಂಬಣ್ಣ ಬಾಳಿಕಾಯಿ, ಪಿ.ಬಿ ಖರಾಟೆ, ಮಲ್ಲೇಶಪ್ಪ ಹೊಟ್ಟಿ, ಸಿ.ಆರ್ ಲಕ್ಕುಂಡಿಮಠ, ಎನ್.ವಿ ಹೇಮಗಿರಿಮಠ, ಕುಬೇರಪ್ಪ ಮಹಾಂತಶೆಟ್ಟರ, ಚನ್ನಪ್ಪ ಕೋಲಕಾರ, ಗಂಗಾಧರಯ್ಯ ಹಾಲೇವಾಡಿಮಠ, ರಾಜಶೇಖರ ಶಿಗ್ಲಿಮಠ, ಶೇಖಪ್ಪ ಹುರಕಡ್ಲಿ, ರವಿ ದಾನಿ, ಶಿವನಗೌಡ ಕಟ್ಟಿಗೌಡ್ರ, ಎಸ್.ವಿ ಅಂಗಡಿ ಇದ್ದರು. ಆನಂದ ಮೆಕ್ಕಿ ಸ್ವಾಗತಿಸಿದರು. ಶಿವಲಿಂಗಯ್ಯ ಹಾಲೇವಾಡಿಮಠ ನಿರೂಪಿಸಿದರು.