ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವಕ್ಕೆ ಸಂಭ್ರಮದ ತೆರೆ

ಸಂಜೆವಾಣಿ ವಾರ್ತೆ

 ದಾವಣಗೆರೆ. ಮಾ.೧೮; ಗುರುರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿಯ ಸಂಸ್ಮರಣೆಗಾಗಿ ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವಕ್ಕೆ  ಸಂಭ್ರಮದ ತೆರೆ ಬಿದ್ದಿತು.ಮಂತ್ರಾಲಯದ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣ ಸಮಿತಿ ಮತ್ತು ದಾವಣಗೆರೆಯ ಮಹೋತ್ಸವ ಸಮಿತಿ ವತಿಯಿಂದ ಮಾ. 11 ರಿಂದ 17ರ ವರೆಗೆ ಹಮ್ಮಿಕೊಂಡಿದ್ದ ಧಾರ್ಮಿಕ, ಸಾಂಸ್ಕೃತಿಕ ಹಬ್ಬಕ್ಕೆ ಬೆಣ್ಣೆನಗರಿಯ ಭಕ್ತರು ಸಾಕ್ಷಿಯಾದರು.ಏಳು ದಿನಗಳ ಕಾಲ ವಿಶೇಷ ಪೂಜೆ, ಅಭಿಷೇಕ, ಸುಪ್ರಭಾತ, ಹೋಮ, ಲಕ್ಷ ಪುಷ್ಪಾರ್ಚನೆ ಜತೆಗೆ ಪ್ರವಚನಗಳು ನಡೆದವು. ವಿವಿಧ ಮಠಾಧೀಶರ ಉಪಸ್ಥಿತಿಯು ಉತ್ಸವದ ಕಳೆಯನ್ನು ಹೆಚ್ಚಿಸಿತು. ಪಂಡಿತರಿಂದ ಜ್ಞಾನ ಕಾರ್ಯ ನಡೆದರೆ, ವಿವಿಧ ಕಲಾವಿದರು ಸಂಗೀತ, ನೃತ್ಯ ಇನ್ನಿತರ ಕಲಾ ಪ್ರಕಾರಗಳ ಮೂಲಕ ಎಲ್ಲರಿಗೆ ಗುರುರಾಯರ ಸ್ಮರಣೆ ಮಾಡಿಸಿದರು.ಪಲಿಮಾರು ಮಠದ ಶ್ರೀಗಳು ಏಳೂ ದಿನಗಳ ಕಾಲ ಉಪಸ್ಥಿತರಿದ್ದು ನಿತ್ಯವೂ ಅನುಗ್ರಹ ಸಂದೇಶ ನೀಡಿದರು. ಪೇಜಾವರ, ಅದಮಾರು, ಶ್ರೀ ವ್ಯಾಸರಾಜ, ಶ್ರೀ ಶ್ರೀಪಾದರಾಜ ಮಠದ ಗುರುಗಳು ಆಗಮಿಸಿ ರಾಯರ ಮಹಿಮೆಯನ್ನು ಕೊಂಡಾಡಿದರು.ಭರತನಾಟ್ಯ, ಕೊಳಲು, ವೀಣಾ ವಾದನ, ದಾಸವಾಣಿ ಜತೆಗೆ ವಿವಿಧ ಭಜನಾ ಮಂಡಳಿಯವರು ಉತ್ಸಾಹದಿಂದ ಪಾಲ್ಗೊಂಡು ಮಹೋತ್ಸವ ರಂಗೇರುವಂತೆ ಮಾಡಿದರು. ರಸಪ್ರಶ್ನೆ ಸ್ಪರ್ಧೆ, ದೀಪೋತ್ಸವ, ಸಾಮೂಹಿಕ ಲಕ್ಷ್ಮೀ ಶೋಭಾನ ಪಾರಾಯಣ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಉತ್ಸವದ ಎರಡನೇ ದಿನ ಭವ್ಯ ಶೋಭಾಯಾತ್ರೆ ನೆರವೇರಿತು.