ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ


ಮುಂಡಗೋಡ, ಡಿ3: ನಗರದ ಗ್ರಾಮದೇವಿ ಶ್ರೀ ಮಾರಿಕಾಂಬಾ ದೇವಿಯ 6ನೇ ಜಾತ್ರಾ ಮಹೋತ್ಸವ ಫೆಬ್ರವರಿ 15 ರಿಂದ 23 ರವರೆಗೆ 9 ದಿನಗಳ ಕಾಲ ಜರುಗಲಿದೆ ಎಂದು ಜಾತ್ರಾ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಪಿ.ಪಿ ಛಬ್ಬಿ ತಿಳಿಸಿದರು.
ಪಟ್ಟಣದ ಮಾರಿಕಾಂಬಾ ದೇವಾಲಯದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ವಿಷಯ ತಿಳಿಸಿದ ಅವರು, ಜಾತ್ರೆ ಪೂರ್ವ ಅಗತ್ಯ ಸಕಲ ಸಿದ್ದತೆ ಕ್ರಮ ಕೈಗೊಳ್ಳಲಾಗಿದೆ. ಸ್ವಯಂ ಇಚ್ಚೆಯಿಂದ ಭಕ್ತಾಧಿಗಳು ದೇಣಿಗೆ ನೀಡಬಹುದು ವಿನಹ ಯಾವುದೇ ರೀತಿ ಒತ್ತಾಯ ಮಾಡಲಾಗುವುದಿಲ್ಲ. ಜಾತ್ರಾ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳಬೇಕು ಎಂದು ಹೇಳಿದರು.
ಜಾತ್ರಾ ಪೂರ್ವ ಹೊಬೀಡು: ಜಾತ್ರೆ ಪ್ರಯುಕ್ತ ಜನವರಿ 25 ಮಂಗಳವಾರ, ಜನವರಿ 28 ಶುಕ್ರವಾರ, ಫೆಬ್ರವರಿ 1 ಮಂಗಳವಾರ, ಫೆಬ್ರವರಿ 4 ಶುಕ್ರವಾರ ಹಾಗೂ ಫೆಬ್ರವರಿ 8 ಮಂಗಳವಾರ ಸೇರಿದಂತೆ 5 ದಿನ ಹೊರಬೀಡು ನಡೆಯಲಿದ್ದು, ಕೊನೆಯ ಹೊರಬೀಡು ದಿನದಂದು ಪಟ್ಟಣದಲ್ಲಿ ಅಂಕೆ ಹಾಕಲಾಗುತ್ತದೆ.
ಫೆಬ್ರವರಿ 15 ರಂದು ಜಾತ್ರೆ ಪ್ರಾರಂಭವಾಗಲಿದ್ದು, 16 ರಂದು ಬೆಳಿಗ್ಗೆ ರಥೋತ್ಸವ ಕಾರ್ಯಕ್ರಮ, 17 ರಂದು ಉಡಿ ತುಂಬುವುದು, ಹಣ್ಣು ಕಾಯಿ ಸೇವೆ ಪ್ರಾರಂಭವಾಗಿ ಫೆಬ್ರವರಿ 23 ಮಧ್ಯಾಹ್ನ 2 ಘಂಟೆವರೆಗೆ ನಡೆಯಲಿದ್ದು, ಬಳಿಕ ವಿಸರ್ಜನಾ ಮೆವಣಿಗೆ ನಡೆದು ಜಾತ್ರೆಗೆ ತೆರ ಬಿಳಲಿದೆ.
ಜನವರಿ 25 ರಿಂದ ಏಪ್ರಿಲ್ 2 ರವರೆಗೆ ಮುಂಡಗೋಡ, ನ್ಯಾಸರ್ಗಿ ಹಾಗೂ ಕಾಳಗನಕೊಪ್ಪ ಬಂಧುಗಳು ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ. ಯುಗಾದಿ ಹಬ್ಬದಂದು ದೇವಿಯ ಮರು ಪ್ರತಿಷ್ಠಾಪನೆ ನಡೆಯಲಿದೆ ಎಂದು ಹೇಳಿದರು.
ಜಾತ್ರಾ ಸಮಿತಿಯ ವಸಂತ ಕೊಣಸಾಲಿ, ರಮೇಶ ಕಾಮತ, ರಾಮಣ್ಣ ಕುನ್ನೂರ, ಬಾಬಣ್ಣ ಸಾಲಗಾವಿ, ನಾರಾಯಣ ಬೆಂಡ್ಲಗಟ್ಟಿ, ರಾಜಪ್ಪ ಯಡ್ಡಳ್ಳಿ, ಯಲ್ಲಪ್ಪ ರಾಣಿಗೇರ, ಎಸ್.ಎಸ್ ಪಾಟೀಲ, ಅಶೋಕ ಕಲಾಲ, ಪರಶುರಾಮ ರಾಣಿಗೇರ ಮುಂತಾದವರು ಉಪಸ್ಥಿತರಿದ್ದರು.