ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ:ಪೂರ್ವಭಾವಿ ಸಿದ್ಧತಾ ಸಭೆ


ಸಂಜೆವಾಣಿ ವಾರ್ತೆ
ಕೊಪ್ಪಳ, ಅ.12: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅರ್ಥಪೂರ್ಣವಾಗಿ ಆಗಬೇಕು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮತ್ತು ಸಮಾಜಕ್ಕಾಗಿ ದುಡಿಯುವವರನ್ನು ಗುರುತಿಸಿ ಸಮಾರಂಭದಲ್ಲಿ ಗೌರವಿಸಿ ಅವರಿಗೆ ಮುನ್ನೆಲೆಗೆ ತರುವ ವ್ಯವಸ್ಥೆ ಆಗಬೇಕು ಎಂದು ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಅವರು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಕ್ಟೋಬರ್ 11ರಂದು ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯು ಆದಿ ಋಷಿಯಾಗಿದ್ದಾರೆ. ಈ ಸಮಾಜದಲ್ಲಿ ಸಹ ಅನೇಕ ಕಲಾವಿದರಿದ್ದಾರೆ. ವಾಲ್ಮೀಕಿ ಸಮಾಜ ಬಾಂಧವರ ಕಲೆಗಳು ದಿನೇದಿನೆ ಮರೆಮಾಚುತ್ತಿದ್ದು, ಅಂತಹ ವಿಶಿಷ್ಟ ಕಲೆಗಳ ಕಲಾರಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಸಹ ಆಗಬೇಕು. ದಿನಾಚರಣೆಯಂದು ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಸ್ವಯಂ ಪ್ರೇರಣೆಯಿದ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಮಾತನಾಡಿ, ಅಕ್ಟೋಬರ್ 28ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಆಯಾ ಅಧಿಕಾರಿಗಳು ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು. ಅಂದು ಮೆರವಣೆಗೆ ಹೊರಡುವ ಮಾರ್ಗದಲ್ಲಿ ಮತ್ತು ಸಾಹಿತ್ಯ ಭವನದಲ್ಲಿ ನಗರಸಭೆಯಿಂದ ಶುಚಿತ್ವ ಕಾರ್ಯವಾಗಬೇಕು. ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ನಗರದ ಪ್ರಮುಖ ರಸ್ತೆಗಳಲ್ಲಿನ ವೃತ್ತಗಳಲ್ಲಿ ದೀಪಾಲಂಕಾರ ಮಾಡಬೇಕು. ಕಲಾ ತಂಡಗಳು ಮತ್ತು ಉಪನ್ಯಾಸದ ವ್ಯವಸ್ಥೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಇಲಾಖಾ ಮುಖ್ಯಸ್ಥರು ಹಾಗೂ ಸಿಬ್ಬಂದಿ ಕಡ್ಡಾಯ ಭಾಗವಹಿಸಬೇಕು ಎಂದರು. ಅಕ್ಟೋಬರ್ 28ರಂದು ಬೆಳಿಗ್ಗೆ 8.30ಕ್ಕೆ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆಯು ಶ್ರೀ ಸಿರಸಪಯ್ಯನ ಮಠದಿಂದ ಸಾಹಿತ್ಯಭವನದವರೆಗೆ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಸಾಹಿತ್ಯಭವನದಲ್ಲಿ ವೇದಿಕೆ ಕಾರ್ಯಕ್ರಮ ಇರುತ್ತದೆ. ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಸಮಾಜದ ಗಣ್ಯರಿಗೆ ಸನ್ಮಾನದ ವ್ಯವಸ್ಥೆ ಸೇರಿದಂತೆ ಸಭೆಯಲ್ಲಿ ಚರ್ಚಿಸಿದಂತೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜು ಅವರು ಸಭೆಗೆ ತಿಳಿಸಿದರು. ಕುಮಾರರಾಮ ಕುಮ್ಮಟದುರ್ಗ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು. ಜಿಲ್ಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ‌ ಪ್ರತ್ಯೇಕ ಕಟ್ಟಡದ ವ್ಯವಸ್ಥೆ ಆಗುವ ಬಗ್ಗೆ ಠರಾವು ಮಾಡಿ ರಾಜ್ಯ ಕಚೇರಿಗೆ ಕಳುಹಿಸಬೇಕು ಎಂದು ಸಮಾಜದ ಯುವ ಮುಖಂಡರಾದ ಮಂಜುನಾಥ ಜಿ. ಗೊಂಡಬಾಳ ಅವರು ಕೋರಿದರು. ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ವಸತಿ ನಿಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಟನಕನಕಲ್ ದ ವಾಲ್ಮೀಕಿ ಸಮುದಾಯ ಭವನಕ್ಕೆ ಹದ್ದು ಬಸ್ತು ಆಗಬೇಕು. ಎಸ್ಟಿ ಜನತೆಗೆ ಸಹ ಬ್ಯಾಂಕನಲ್ಲಿ ಸಾಲ ಪಡೆಯಲು ಸರಳ ವ್ಯವಸ್ಥೆ ಆಗಬೇಕು. ಖಾಸಗಿ ಬ್ಯಾಂಕನಲ್ಲಿರುವ ಸರಕಾರಿ ಅಕೌಂಟಗಳನ್ನು ಸರಕಾರಿ ಬ್ಯಾಂಕ್ ಗೆ ವರ್ಗಾಯಿಸಬೇಕು. ಸರಕಾರಿ ಸಬ್ಸಿಡಿಗಳು ತುರ್ತಾಗಿ ಸಿಗುವ ವ್ಯವಸ್ಥೆ ಆಗಬೇಕು ಎಂದು ವಾಲ್ಮೀಕಿ ಸಮುದಾಯದ ಮುಖಂಡರಾದ ರಾಮಣ್ಣ ಕಲ್ಲನವರ, ರತ್ನಾಕರ ತಳವಾರ, ಶರಣಪ್ಪ‌ ನಾಯಕ, ಸುರೇಶ‌ ಡೊಣ್ಣಿ, ಎಸ್. ಹೆಚ್.‌ಸುರಪುರ, ರುಕ್ಮಣ್ಣ ಶ್ಯಾವಿ, ಚಿನ್ನಪ್ಪ ನಾಯಕ, ಶಿವಮೂರ್ತಿ ಗುತ್ತೂರ, ಕೊಟೇಶ ದದೇಗಲ್, ಕೋಟೇಶ ತಳವಾರ ಹಾಗೂ ಇತರರು ಒತ್ತಾಯಿಸಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕೊಪ್ಪಳ ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಗದೀಶ ಜೆ.ಹೆಚ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ಕೊಪ್ಪಳ ತಾಪಂ ಇಓ ದುಂಡಪ್ಪ ತುರಾದಿ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಪಿ.ಎಂ.ಮಲ್ಲಯ್ಯ, ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ.ಕಾಳೆ, ವಾಲ್ಮೀಕಿ ಸಮಾಜದ ಮುಖಂಡರಾದ ಪಾಲಾಕ್ಷಪ್ಪ, ಕೆ.ಮಲ್ಲಿಕಾರ್ಜುನ, ಉಮೇಶ ವಾಲ್ಮೀಕಿ ಸೇರಿದಂತೆ ವಿವಿಧ ಗಣ್ಯರು, ಸಂಘ ಸಂಸ್ಥೆಗಳ ಪ್ರಮುಖರು ಇದ್ದರು,