ಶ್ರೀ ಪೊಂಪಯ್ಯ ತಾತ ಪಿರಾಮಿಡ್ ಕೇಂದ್ರ ಉದ್ಘಾಟನೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.04: ಸಿರುಗುಪ್ಪ ತಾಲ್ಲೂಕು, ಬಂಡ್ರಾಳ್ ಗ್ರಾಮದ ಪೊಂಪಯ್ಯ ತಾತನವರ ಮಠದಲ್ಲಿ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ, ಶ್ರೀ ಪುಟ್ಟರಾಜ ಕವಿಗವಾಯಿಗಳ ಹಾಗೂ ಬಂಡ್ರಾಳ್ ಮಠದ ಪೊಂಪಯ್ಯ ತಾತನವರ 32ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಪೊಂಪಯ್ಯ ತಾತ ಪಿರಾಮಿಡ್ ಕೇಂದ್ರ ಉದ್ಘಾಟನಾ ಸಮಾರಂಭ, ಧರ್ಮಸಭೆ, ಸಂಗೀತ, ನೃತ್ಯ, ಧ್ಯಾನ ಕಾರ್ಯಕ್ರಮ, ಸಸ್ಯಾಹಾರ ಜಾಥಾ ನಡೆಯಿತು. 
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪರಮಪೂಜ್ಯ ಬಸವಭೂಷಣ ಸ್ವಾಮಿಗಳು, ಮಾತನಾಡಿ, ಶ್ರೀ ಸಿದ್ಧಲಿಂಗ ಜಗದ್ಗುರುಗಳು, ಶ್ರೀ ಪುಟ್ಟರಾಜ ಕವಿಗವಾಯಿಗಳು,  ಪೂಜ್ಯ ಪೊಂಪಯ್ಯ ತಾತನವರು ಸಮಾಜಮುಖಿಯಾಗಿ ಬದುಕಿದರು, ಲೋಕದ ಹಿತದಲ್ಲಿ ತಮ್ಮ ಹಿತವನ್ನು ಕಂಡರು.  ಇಂತಹವರ ಹೆಸರಿನಲ್ಲಿ ಧ್ಯಾನ ಸಾಧನೆಗಾಗಿ ಪಿರಾಮಿಡ್ ನಿರ್ಮಿಸಿರುವುದು ಸಾರ್ಥಕದ ಕೆಲಸ ಎಂದರು.  ಪೂಜ್ಯರ ಆದರ್ಶದಂತೆ ಪ್ರತಿಯೊಬ್ಬರು ಧರ್ಮವಂತರಾಗಿ ಧರ್ಮಮಾರ್ಗದಲ್ಲಿ ನಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ  ಟಿ.ಹೆಚ್.ಎಂ. ಬಸವರಾಜ, ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚು-ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು, ಜನರು ಎಲ್ಲಿಯವರೆಗೆ ಪುಸ್ತಕಗಳನ್ನು ಓದಿ ಜ್ಞಾನವಂತರಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಸಮಾಜ ಉದ್ದಾರವಾಗುವುದಿಲ್ಲ. ಇವತ್ತು ಹಲವಾರು ಧಾರ್ಮಿಕ ಸಂಸ್ಥೆಗಳು ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂಸ್ಥೆಗಳು ಇಂದಿನ ಯುವ ಜನಾಂಗವನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಕರೆ ತರುವಲ್ಲಿ ವಿಫಲವಾಗಿವೆ ಎಂದರು. ಇಂದಿನ ಯುವಜನಾಂಗ ದಾರಿ ತಪ್ಪುತ್ತಿದ್ದು, ಅವರನ್ನು ಸರಿದಾರಿಗೆ  ತರಲು ಸಮಾಜ ಪ್ರಯತ್ನಿಸಬೇಕೆಂದು ತಿಳಿಸಿದರು.
ಸಸ್ಯಾಹಾರ ಜಾಥಾವನ್ನು ಬಳ್ಳಾರಿಯ ಪಿರಾಮಿಡ್ ಮಾಸ್ಟರ್ ಆದ ಶ್ರೀಮತಿ ರಾಜೇಶ್ವರಿ ರವರು ಚಾಲನೆ ನೀಡಿದರು. ಅವರು ಮಾತನಾಡಿ ಇವತ್ತು ಜಗತ್ತು ಸಸ್ಯಾಹಾರದ ಕಡೆಗೆ ಬರುತ್ತಿದ್ದು, ಪ್ರತಿಯೊಬ್ಬರು ಸಸ್ಯಹಾರಿಗಳಾಗಬೇಕು, ಸಸ್ಯಾಹಾರ ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲದೇ, ಪ್ರತಿ ಪ್ರಾಣಿ-ಪಕ್ಷಿಗಳ ಬಗ್ಗೆ ದಯಾಗುಣವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ನಿರತರಾದ ಟಿ.ಹೆಚ್.ಎಂ. ಬಸವರಾಜ, ಜಿಲ್ಲಾಧ್ಯಕ್ಷರು, ಕರ್ನಾಟಕ ಇತಿಹಾಸ ಅಕಾಡಮಿ ಬಳ್ಳಾರಿ, ಚನ್ನಬಸವನಗೌಡರು, ತಾಲ್ಲೂಕು ಅಧ್ಯಕ್ಷರು, ಅಖಿಲ ಭಾರತ ಮಹಾಸಭಾ ಸಿರುಗುಪ್ಪ ಇವರಿಗೆ ಟ್ರಸ್ಟಿನ ವತಿಯಿಂದ ಅವರ ಸಮಾಜ ಸೇವೆಯನ್ನು ಗುರುತಿಸಿ, ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಮಲ್ಲನಗೌಡರು ಗವಾಯಿಗಳು ಬಂಡ್ರಾಳ್, ಪ್ರಾರ್ಥನಾ ಸಂಗೀತಾ ನಡೆಸಿಕೊಟ್ಟರು, ಎಂ. ನಾಗಭೂಷಣ ಗವಾಯಿಗಳು, ಬಳ್ಳಾರಿ, ಡಿ.ವಿರುಪಾಕ್ಷಪ್ಪ ತಬಲಾ ದೇವಲಾಪುರ ಇವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಿತು.
ಕುಮಾರಿ ಸಾನ್ವಿ ಕುರುಗೋಡು, ಕುಮಾರಿ ಪಾವನಿ ಕುರುಗೋಡು ಇವರು ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರಾದ ಬಂಡ್ರಾಳ ಮ್ಯತ್ಯುಂಜಯ ಸ್ವಾಮಿ ಇವರು ವಹಿಹಿದ್ದರು, ಪಿರಾಮಿಡ್ ನಿರ್ಮಾಣ ಕಾರ್ಯದಲ್ಲಿ ಸೇವೆ ಸಲ್ಲಿಸಿದ ತಮಿಳುನಾಡಿನ ನಾಗರಾಜ, ಚನ್ನಪ್ಪ ದಂಪತಿಗಳನ್ನು ಸನ್ಮಾಮಿಸಲಾಯಿತು.
ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಸಿರಿವಾರ, ಸಂಗನಕಲ್ಲು, ಡಿ.ಹಿರೇಹಾಳ್ ಮುಂತಾದ ಕಡೆಗಳಿಂದ ಬಂದ ಪಿರಾಮಿಡ್ ಮಾಸ್ಟರ್‍ಗಳು ಸಸ್ಯಾಹಾರ ಜಾಥಾವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಜಾಲಿಹಾಳ್ ಶ್ರೀಧರ್‍ಗೌಡ, ಶ್ರೀ ಗೌರಿಶಂಕರಸ್ವಾಮಿ, ಕೋಳೂರು ಚಂದ್ರಶೇಖರ ಗೌಡ, ಎರ್ರಿಸ್ವಾಮಿ, ಧ್ಯಾನಿಗಳಾದ ಶ್ರೀಮತಿ ವಿಜಯಲಕ್ಷ್ಮಿ, ಗೀತಾ ಯಾಧವ್ ಮುಂತಾದವರು ಭಾಗವಹಿಸಿದ್ದರು.
ಶ್ರೀಮತಿ ಶಿಲ್ಪ ಜಡೇಶ್, ಕಾರ್ಯಕ್ರಮ ನಿರೂಪಿಸಿದರು.