ಶ್ರೀ ನಾರಾಯಣಗುರುಗಳ ಆದರ್ಶ ವಿಶ್ವಕ್ಕೆ ಮಾದರಿ:ಪ್ಯಾಟಿ

ಆಳಂದ :ಸೆ.11:ತಾಲ್ಲೂಕಿನ ಮಾಡಿಯಾಳದ ಜೆ.ಪಿ .ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜಿಡಿಎ ಅಧ್ಯಕ್ಷ ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಶ್ಯಾಮರಾವ ಪ್ಯಾಟಿ ಅವರು, ಮನುಷ್ಯ ಮನುಷ್ಯರಲ್ಲಿ ಭೇದ-ಭಾವ ತೋರಿಸಿದರೆ ಮಾನವ ಕುಲಕ್ಕೆ ಕಂಟಕ ಅಷ್ಟೆ? ಅಲ್ಲ ಬದುಕು ನಿರರ್ಥಕ ಎಂದು ಪ್ರತಿಪಾಧಿಸಿದ ಮಹಾನ ಸಂತ, ವೇದಾಂತ ಶಿಖಾಮಣಿ, ತತ್ವಜ್ಞಾನಿ, ಸಮಾಜ ಸುಧಾರಕ, ಧರ್ಮವಂತ, ಅದ್ವೈತ ಸಿದ್ಧಾಂತದ ನಾರಾಯಣ ಗುರುಗಳು ಮಹಾನ ಸಮಾಜ ಸುಧಾರಕರಾಗಿದ್ದರು. ಕೇರಳದ ಶಿವಗಿರಿಯಲ್ಲಿ ಶಿವ ಮಂದಿರ ನಿರ್ಮಿಸುವ ಮೂಲಕ ಅಸ್ಪೃಶ್ಯತೆ ನಿರ್ಮೂಲನೆ, ನಿರ್ಗತಿಕರಿಗೆ ಅಕ್ಷರದ ಜ್ಞಾನ ಸರಳ ಮಾರ್ಗದಲ್ಲಿ ತಿಳಿಸುತ್ತಾ ಲೋಕಸಂಚಾರ ಮಾಡುತ್ತಾ ದಕ್ಷಿಣ ಭಾರತದಲ್ಲಿ ಉದಯಿಸಿ ಅಖಂಡ ಭಾರತ, ಶ್ರೀಲಂಕಾ ಹೀಗೆ ಅನೇಕ ದೇಶ ಸಂಚಾರ ಮಾಡುತ್ತಾ ಸಮಾಜ ಸುಧಾರಣೆಯನ್ನು ನಾರಾಯಣ ಗುರುಗಳು ಮಾಡಿದರು. ಇವರ ಸಾಧನೆಯನ್ನು ಮೆಚ್ಚಿ ನೊಬೆಲ್ ಪ್ರಶಸ್ತಿ ವಿಜೇತರಾದ ರವೀಂದ್ರನಾಥ ಠಾಗೋರ್, ಮಹಾತ್ಮಗಾಂಧಿಯಂತಹ ಅನೇಕ ಮಹಾತ್ಮರು ನಾರಾಯಣ ಗುರುಗಳಿಗೆ ಭೇಟಿಯಾಗಿ ಅವರಿಂದ ಪ್ರಭಾವಿತರಾಗಿದ್ದರು ಎಂದು ಹೇಳಿದರು. ಶಿವಯ್ಯ ಗುತ್ತೇದಾರ ಭಾವಚಿತ್ರದ ಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಕಾಂತ ಕೌಲಗಿ, ಮಾಜಿ ಅಧ್ಯಕ್ಷರಾದ ಪ್ರಭಾಕರ ರಾಮಜಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪ್ರಭು ಸರಸಂಬಿ, ಉದ್ದಿಮೆದಾರ ದತ್ತ ಶಿರೂರ್, ಪತ್ರಕರ್ತರಾದ ಅರ್ಜುನ್ ಬಂಡೆ, ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಹಶಿಕ್ಷಕರಾದ ಶರಣಬಸಪ್ಪ ಉಪ್ಪಿನ್ ನಿರ್ವಹಿಸಿದರು. ಸಂತೋಷ್ ಕುಮಾರ್ ಖಾನಾಪುರೆ ಸ್ವಾಗತಿಸಿದರೆ, ರಾಜಶೇಖರ ಬಿರಾದಾರ ವಂದಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಮುಕ್ತಾಯ ಮಾಡಲಾಯಿತು.