ಶ್ರೀ ದಿಗಂಬರೇಶ್ವರ ಜಾತ್ರಾ ಮಹೋತ್ಸವ:ನಾಳೆ ರಥೋತ್ಸವ

ಬಾಗಲಕೋಟೆ: ಮಾ 14 : ತಾಲೂಕಿನ ಸುಕ್ಷೇತ್ರ ಸಾಳಗುಂದಿ ಗ್ರಾಮದಲ್ಲಿ ಶ್ರೀ ದಿಗಂಬರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು ದಿ. 15 ರಂದು ಸೋಮವಾರ ಎರಡನೇ ವರ್ಷದ ರಥೋತ್ಸವ ಜರುಗಲಿದೆ.
ಮಹಾ ಶಿವರಾತ್ರಿಯ ದಿನದಂದೇ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಆರಂಭವಾಗಿದ್ದು ದಿ. 14 ರಂದು ರಾತ್ರಿ ವಿವಿಧ ಗ್ರಾಮದವರಿಂದ ಅಖಂಡ ಭಜನಾ ಕಾರ್ಯಕ್ರಮ ಜರುಗಲಿದೆ. ಶ್ರೀ ದಿಗಂಬರೇಶ್ವರ ಮಠದಲ್ಲಿ ನಿರಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.
ದಿ. 15 ರಂದು ಸೋಮವಾರ ಹಳೇ ಸಾಳಗುಂದಿಯಿಂದ ಮುಂಜಾನೆ 9 ಗಂಟೆಗೆ ಸಕಲ ವಾದ್ಯ ವೃಂದಗಳೊಂದಿಗೆ ಶ್ರೀ ದಿಗಂಬರೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಸಹಿತ ಆರತಿಯೊಂದಿಗೆ ಹೊಸ ಸಾಳಗುಂದಿ ಶ್ರೀ ದಿಗಂಬರೇಶ್ವರ ಮಠಕ್ಕೆ ತಲುಪಲಿದೆ. ಮುಂಜಾನೆ 10 ಗಂಟೆಗೆ ಶ್ರೀ ಸಿದ್ದಮಲ್ಲಯ್ಯ ಸ್ವಾಮಿಗಳವರ ಭಾವಚಿತ್ರದ ಜೊತೆಗೆ ಮಾಲೆಯ ಮೆರವಣಿಗೆ ಬಾಗಲಕೋಟೆಯ ಹಳಪೇಟೆಯ ಒಕ್ಕಲಿಗರ ಸಮಾಜದವರಿಂದ ಮಾಲೆಯ ಪೂಜೆ, ನಂತರ ಮೆರವಣಿಗೆ ಬಸವೇಶ್ವರ ಬ್ಯಾಂಕ್ ರಸ್ತೆ, ಮುಚಖಂಡಿ ಕ್ರಾಸ್‍ವರೆಗೆ ಹಾಗೂ ಹೊನ್ನಾಕಟ್ಟಿ ಗ್ರಾಮದವರಿಂದ ತೇರಿನ ಕಳಸ, ಮಲ್ಲಾಪೂರ ಗ್ರಾಮದವರಿಂದ ಬಾಳೆಕಂಬ, ಹಳೇ ವೀರಾಪೂರ ಹಾಗೂ ವೀರಾಪೂರ ಪು.ಕೇ.ದಿಂದ ತೇರಿನ ಹಗ್ಗ ಹಾಗೂ ನಂದಿಕೋಲು, ಛಬ್ಬಿ ಗ್ರಾಮದವರಿಂದ ತೇರಿಗೆ ಬೃಹತ್ ಹೂವಿನ ಹಾರ, ಕಬ್ಬು, ಬಾಳೆಕಂಬದೊಂದಿಗೆ ಸಕಲ ಭಕ್ತರೊಂದಿಗೆ ಮೆರವಣಿಗೆ ನವನಗರ ಕ್ರಾಸ್, ವೀರಾಪೂರ ಪುನರ್ವಸತಿ ಕೇಂದ್ರದ ಮಾರ್ಗವಾಗಿ ಸಾಳಗುಂದಿ ಗ್ರಾಮದ ಶ್ರೀ ದಿಗಂಬರೇಶ್ವರ ಮಠ ತಲುಪಿ ಸಂಜೆ 5-30 ಗಂಟೆಗೆ ರಥೋತ್ಸವ ಜರುಗಲಿದೆ.
ಅಂದೇ ಸೋಮವಾರ ರಾತ್ರಿ 10-30 ಗಂಟೆಗೆ ಹೊನ್ನುರಿನ ಮಲ್ಲಿಕಾರ್ಜುನ ನಾಟಕ ಸಂಘದಿಂದ ದೀಪಾವಳಿ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ. ದಿ. 19 ರಂದು ಸಾಯಂಕಾಲ 5.30 ಗಂಟೆಗೆ ರಥದ ಕಳಸ ಇಳಿಯುವ ಕಾರ್ಯಕ್ರಮ ಜರುಗಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.