ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಬೃಹತ್ ಶಿಲೆಗಳ ಆಗಮನ 

ಬಾಳೆಹೊನ್ನೂರು –ಜ. 2: ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಪರಿಸರದಲ್ಲಿ ಪ್ರತಿಷ್ಠಾಪಿಸುತ್ತಿರುವ 51 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಶಿಲಾ ಮೂರ್ತಿ ಸಂಬAಧವಾಗಿ ಆಗಮಿಸಿದ ಬೃಹತ್ ಪಾಣಿ ಪೀಠದ ಎರಡನೇ ಶಿಲೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ರವಿವಾರ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು ಈಗಾಗಲೇ 110 ಟನ್ ಭಾರದ ಶಿಲೆ ಬಂದಿತ್ತು. ಈಗ ಬಂದಿರುವ ಪಾಣಿ ಪೀಠದ ಶಿಲೆ 8ಅಡಿ ಎತ್ತರ, 27ಅಡಿ ಉದ್ದ 23.7ಅಡಿ ಅಗಲ ಇದ್ದು 150 ಟನ್ ತೂಕ ಹೊಂದಿದೆ. ಇದು ಭಾರೀ ಪ್ರಮಾಣದ ಕಾರ್ಯವಾಗಿದ್ದು ಶಿಲೆಗಳನ್ನು ಆಂಧ್ರ ಪ್ರದೇಶದಿಂದ ತರಬೇಕಾಗಿದೆ. ಇವುಗಳಲ್ಲದೇ ಇನ್ನೂ ಎರಡು ಶಿಲೆಗಳು ಬರಲಿದ್ದು ಅದರಲ್ಲಿ ಒಂದರ ಗಾತ್ರ 22ಅಡಿ ಉದ್ದ 32ಅಡಿ ಅಗಲ 11ಅಡಿ ಎತ್ತರ ಇದ್ದು 250 ಟನ್ ಭಾರ ಹೊಂದಿರುತ್ತದೆ. ಇನ್ನೂ ಬರಲಿರುವ 4ನೇ ಶಿಲೆ 32ಅಡಿ ಉದ್ದ 16ಅಡಿ ಅಗಲ 10ಅಡಿ ಎತ್ತರ ಇದ್ದು 300 ಟನ್ ಭಾರ ಹೊಂದಿರುತ್ತದೆ. ಮೂರ್ತಿಯ ಕೆತ್ತನೆ ನಿರ್ಮಾಣ ಕಾರ್ಯವನ್ನು ಬೆಂಗಳೂರಿನ ಅಶೋಕ ಗುಡಿಗಾರ ಮತ್ತು ಗೌತಮ ಗುಡಿಗಾರ ವಹಿಸಿಕೊಂಡಿದ್ದು ಉಸ್ತುವಾರಿಯನ್ನು ಗುತ್ತಿಗೆದಾರ ವೀರೇಶ ಪಾಟೀಲ ಮತ್ತು ಶ್ರೀನಿವಾಸ ರೆಡ್ಡಿ ಮಾಡುತ್ತಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಶಿಲಾ ಮೂರ್ತಿ ಪ್ರತಿಷ್ಠಾಪನೆಗೆ ಬಹುತೇಕ ಇನ್ನೂ ಒಂದು ವರ್ಷದ ಅವಧಿ ಬೇಕಾಗಬಹುದು ಎಂದು ಅವರು ಆಗಮಿಸಿದ ಪತ್ರಕರ್ತರಿಗೆ ತಿಳಿಸಿದರು.