ಶ್ರೀ ಜಂಬುನಾಥೇಶ್ವರ ಸ್ವಾಮಿಮಹಾರಥೋತ್ಸವ: ಪೂರ್ವಸಿದ್ಧತೆಗೆ ಸೂಚನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಏ04: ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ ಹಾಗೂ ಶ್ರೀ ಜಂಬುನಾಥೇಶ್ವರ ಸ್ವಾಮಿ ದೇವಸ್ಥಾನದಿಂದ ಏಪ್ರೀಲ್ 21ರಂದು ನಡೆಯುವ ಜಂಬುನಾಥಹಳ್ಳಿಯ ಶ್ರೀ ಜಂಬುನಾಥೇಶ್ವರ ಸ್ವಾಮಿ ಮಹಾ ರಥೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ  ಅಧ್ಯಕ್ಷತೆಯಲ್ಲಿ  ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರತಿ ವರ್ಷದಂತೆ ಈ ವರ್ಷವು ನಡೆಯುವ ಶ್ರೀ ಜಂಬುನಾಥೇಶ್ವರ ಸ್ವಾಮಿ ತೇರಿನ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು. ಕಲ್ಲಹಳ್ಳಿ, ರಾಜಾಪುರ, ವೆಂಕಟಗಿರಿ, ಜಂಬುನಾಥಹಳ್ಳಿ, ಸಂಕ್ಲಾಪುರ, ಹೊಸಪೇಟೆ, ಕಾಕುಬಾಳು, ಅಮರಾವತಿ, ಬಾದಾಮಿ, ರಾಣೇಬೆನ್ನೂರ, ಎರೆಬೂದಿಹಾಳ, ಕೊಟ್ಟೂರ, ಹೊಳಗುಂದಿ, ಅನಗವಾಡಿ, ಶ್ಯಾಮನೂರ ಸೇರಿದಂತೆ ಅನೇಕ ಕಡೆಗಳಿಂದ ಬರುವ ಭಕ್ತರಿಗೆ ವಸತಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕು. ಕಡುಬಿನ ಕಾಳಗ ಮತ್ತು ಗಂಗೆಪೂಜೆ ಕಾರ್ಯಕ್ರಮಗಳಿಗು ಸಹ ಅಚ್ಚುಕಟ್ಟಾದ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಚುನಾವಣೆಯ ಹಿನ್ನೆಲಯಲ್ಲಿ ನೀತಿ ಸಂಹಿತೆ ಪಾಲನೆಯೊಂದಿಗೆ ಏಪ್ರೀಲ್ 21ರಂದು ಬೆಳಗ್ಗೆ 8 ಗಂಟೆಯಿಂದ 9 ಗಂಟೆವರೆಗೆ ಶ್ರೀ ಜಂಬುನಾಥೇಶ್ವರ ಮಡಿ ತೇರನ್ನು ಎಳೆಯಲಾಗುತ್ತದೆ. ಸಂಜೆ 5.30 ರಿಂದ 6.30ರವರೆಗೆ ಮಹಾ ರಥೋತ್ಸವ ನಡೆಯಲಿದೆ. ಏಪ್ರೀಲ್ 22ರಂದು ಕಡುಬಿನ ಕಾಳಗ ನಡೆಯಲಿದೆ. ಏಪ್ರೀಲ್ 28ರಂದು ಗಂಗಾಪೂಜೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಸಭೆಯಲ್ಲಿ ಹೊಸಪೇಟೆ ತಹಸೀಲ್ದಾರರು, ಜಂಬುನಾಥೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ಹಾಗೂ ಇತರರು ಪಾಲ್ಗೊಂಡಿದ್ದರು.