ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ 30: ಪಟ್ಟಣದಲ್ಲಿ ಅನೇಕ ಪ್ರಾಚೀನ ಇತಿಹಾಸ ಹೊಂದಿರುವ ಸ್ಥಳಗಳಿದ್ದು ಅದರಲ್ಲಿ ಹಿರೇಬಣದಲ್ಲಿರುವ ರಾಘವೇಂದ್ರಸ್ವಾಮಿಗಳ ಮಠವು ಒಂದಾಗಿದೆ. ಸುಮಾರು 303 ವರ್ಷಗಳ ಹಿಂದೆ ಲಕ್ಷ್ಮೇಶ್ವರದಲ್ಲಿ ಇಟಗಿ ಮನೆತನದವರು ರಾಯರ ಮೃತ್ತಿಕಾ ಬೃಂದಾನವನ್ನು ಅವರ ಮನೆಯಲ್ಲಿ ಪ್ರತಿಷ್ಠಾಪಿಸಿದ್ದು ಅಂದಿನಿಂದಿ ಈ ಭಾಗದಲ್ಲಿ ರಾಯರ ಮಠ ಸ್ಥಾಪನೆಯಾಗಿ ಸಾವಿರಾರು ಭಕ್ತರನ್ನು ಸೆಳೆಯುತ್ತಿದೆ.
ಹಿನ್ನಲೆಃ ಇಟಗಿ ಮನೆತನದವರು ಕರ್ಮಠ ಬ್ರಾಹ್ಮಣರು, ಅಗ್ನಿಹೋತ್ರಿಗಳು ಆಗಿದ್ದ ಆಚಾರ್ಯರೊಬ್ಬರು ರಾಘವೇಂದ್ರಸ್ವಾಮಿಗಳ ಆರಾಧನೆ ನಿಮಿತ್ಯ ಪ್ರತಿವರ್ಷ ಮಂತ್ರಾಲಯಕ್ಕೆ ಸೇವೆ ಮಾಡಲು ಹೋಗುತ್ತಿದ್ದರೆನ್ನಲಾಗುತ್ತಿದ್ದು, ಕೆಲ ಕಾಲನಂತರ ಆಚಾರ್ಯರ ಸಂಧ್ಯಾಕಾಲಕ್ಕೆ ಈ ಸೇವೆ ಅಸಾಧ್ಯವೆನ್ನುವಂತಾದಾಗ ಅವರು ಮನನೊಂದು ರಾಯರನ್ನು ಸ್ಮರಿಸಿದರು. ಆಗ ರಾಯರು ವೃದ್ದ ಬ್ರಾಹ್ಮಣನ ವೇಷದಲ್ಲಿ ಆಚಾರ್ಯರ ಮನೆಗೆ ಅವರಿಲ್ಲದ ಸಮಯದಲ್ಲಿ ಆಗಮಿಸಿ ಅವರ ಪತ್ನಿಗೆ ಲಕ್ಷ್ಮೀ ನೃಸಿಂಹ ಸಾಲಿಗ್ರಾಮ, ಮೃತ್ತಿಕೆ ಹಾಗೂ ಮಂತ್ರಾಕ್ಷತೆಗಳಿದ್ದ ದೇವರ ಪೆಟ್ಟಿಗೆಯನ್ನು ಇಟ್ಟು ಹೋದರೆಂದು ಪ್ರತಿತವಿದೆ.
ಮಂತ್ರಾಲಯಕ್ಕೆ ಹೋಗಲಾಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದ ಆಚಾರ್ಯರಿಗೆ ಅದೆ ರಾತ್ರಿ ಸ್ವಪ್ನದಲ್ಲಿ ರಾಘವೇಂದ್ರಸ್ವಾಮಿಗಳು ಬಂದು ತಾವು ನೀಡಿದ ಪೆಟ್ಟಿಗೆಯನ್ನು ಅಲ್ಲಿಯೆ ಪ್ರತಿಷ್ಠಾಪಿಸಿದಲ್ಲಿ ತಾವು ಪೂರ್ಣ ಸನ್ನಿಧಾನದಲ್ಲಿರುವದಾಗಿ ತಿಳಿಸಿದ್ದರೆನ್ನಲಾಗುತ್ತಿದೆ. ಆವಾಗಿನಿಂದಲೆ ಲಕ್ಷ್ಮೇಶ್ವರದ ಇಟಗಿ ಅವರ ಮನೆಯಲ್ಲಿಯೇ ಬೃಂದಾವನವನ್ನು ನಿರ್ಮಿಸಿದ್ದರೆನ್ನಲಾಗಿದ್ದು, ಅಂದಿನಿಂದ ಅಂದರೆ 1908 ರವರೆಗೆ ಇಟಗಿ ಮನೆತನದವರಿಂದ ಸೇವೆ ನಡೆದು 1911 ರ ಸುಮಾರಿಗೆ ಇಟಗಿ ಸಂತತಿಯವರೆನ್ನಲಾದ ಹನುಮಂತಾಚಾರ್ಯ ಗೋಪಾಲಾಚಾರ್ಯ ಹೊಂಬಳ ಇವರಿಂದ ಈ ಬೃಂದಾವನದ ಸೇವೆ ನಡೆದು ಬಂದಿದೆ.
ರಾಯರ ಸನ್ನಿಧಿ ಇಲ್ಲಿರುವದರಿಂದ ಅನೇಕ ಆಶ್ಚರ್ಯಕರ ಹಾಗೂ ಪವಾಡ ಸದೃಶ್ಯ ಘಟನೆಗಳು ಇಲ್ಲಿ ನಡೆಯುತ್ತಿದ್ದು, ಇಲ್ಲಿನ ಮಠಕ್ಕೆ ಭಕ್ತಿಯಿಂದ ಸೇವೆ ಸಲ್ಲಿಸಿ ಯಾರನ್ನು ಸಹ ರಾಯರು ಕೈಬಿಟ್ಟಿಲ್ಲ ಎನ್ನುವದನ್ನು ಅನುಭವ ಪಡೆದ ಅನೇಕರು ಹೇಳುತ್ತಾರೆ. ಮೃತ್ತಿಕಾ ಬೃಂದಾವನ ಇರುವ ಕೆಲವೆ ಕೆಲವು ಊರುಗಳಲ್ಲಿ ಲಕ್ಷ್ಮೇಶ್ವರವು ಒಂದಾಗಿದ್ದು, ಈ ಭಾಗದ ಸಾವಿರಾರು ಭಕ್ತರ ಶ್ರದ್ಧಾ ಕೇಂದ್ರವಾಗಿದೆ.
ಕಲಿಯುಗದ ಕಾಮದೇನುವಾಗಿರುವ ರಾಘವೇಂದ್ರಸ್ವಾಮಿಗಳ ಆರಾಧನೆ ಪ್ರತಿವರ್ಷ ಶ್ರಾವಣ ಮಾಸದ ಬಹುಳ ಪ್ರತಿಪದ, ದ್ವಿತಿಯಾ ಹಾಗೂ ತೃತಿಯಾ ತಿಥಿಗಳಂದ ಆಚರಿಸಲಾಗುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ಕೂಡ ಆರಾಧನಾ ಮಹೋತ್ಸವವು ಇದೆ ದಿ.31 ಗುರುವಾರÀ, ಸೆಪ್ಟಂಬರ 01 ಶುಕ್ರವಾರ ಹಾಗೂ ಸೆ.02 ನೇ ಶನಿವಾರದಂದು ರಾಘವೇಂದ್ರಸ್ವಾಮಿಗಳ ಮಠದಲ್ಲಿ ವಿಜೃಂಬಣೆಯಿಂದ ನಡೆಯಲಿದೆ. ಪ್ರತಿದಿನ ಮುಂಜಾನೆ ಸುಪ್ರಭಾತ, ಅಷ್ಟೋತ್ತರ, ಹರಿವಾಯು ಸ್ತುತಿ, ಅಭಿಷೇಕ ಅಲಂಕಾರ ಪೂಜೆ, ಅನ್ನಸಂತರ್ಪಣೆಗಳು ನಡೆಯಲಿವೆ. ಅಲ್ಲದೆ ಸಂಜೆ ತಾರತಮ್ಯ ಭಜನೆ, ಉಪನ್ಯಾಸ, ಸ್ಥಳೀಯರಿಂದ ಸಂಗೀತ ಸೇವೆಗಳು ನಡೆಯಲಿವೆ. . ಸೆ.02 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ರಥೋತ್ಸವ ಜರುಗಲಿದೆ, ನಂತರ 12 ಗಂಟೆಗೆ ಶ್ರೀಮಠದಲ್ಲಿ ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯದಂತೆ ನೆರವೇರಲಿವೆ. ಸಾರ್ವಜನಿಕರು ಆಗಮಿಸಲು ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ ವಿನಂತಿಸಿದ್ದಾರೆ.