ಶ್ರೀ ಗುರು ಚನ್ನವೀರ ಮಹಾಶಿವಯೋಗಿಗಳು ಭಕ್ತರ ಕಾಮಧೇನು

ಕಲಬುರಗಿ: ಡಿ.8:ಲಿಂ. ಶ್ರೀ ಚನ್ನವೀರ ಮಹಾಶಿವಯೋಗಿಗಳು ಜಾತಿ,ಮತ, ಪಂಥ, ಅಂತಸ್ಥು ನೋಡದೆ, ಎಲ್ಲರನ್ನು ಅಪ್ಪಿಕೊಂಡು ಅವರ ಕಷ್ಟಗಳನ್ನು ಪರಿಹರಿಸಿದ್ದಾರೆ. ಜ್ಞಾನ, ಭಕ್ತಿ, ದಾಸೋಹದ ಮೂಲಕ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಕಾಮದೇನು ಆಗಿದ್ದಾರೆ ಎಂದು ಪರಮಪೂಜ್ಯ ಗುರುಪಾದಲಿಂಗ ಮಹಾಶಿವಯೋಗಿಗಳ ಅಭಿಮತÀ ವ್ಯಕ್ತಪಡಿಸಿದರು.

    ನಗರದ ಸಮೀಪದ ಸುಕ್ಷೇತ್ರ ಮುತ್ಯಾನ ಬಬಲಾದನ 'ಶ್ರೀ ಗುರು ಚನ್ನವೀರ ಮಹಾಶಿವಯೋಗಿಗಳ ಮಠ'ದಲ್ಲಿ ಮಂಗಳವಾರ ಜರುಗಿದ 37ನೇ ಪುಣ್ಯ ಸ್ಮರಣೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

    ಶ್ರೀ ಮಠಕ್ಕೆ ಸರ್ವ ಧರ್ಮದವರು ನಿರಂತರವಾಗಿ ಅಂಸಂಖ್ಯಾತ ರೀತಿಯಲ್ಲಿ ಆಗಮಿಸುತ್ತಾರೆಂದರೆ ಲಿಂ.ಪೂಜ್ಯರ ಮಹಿಮೆ, ಅವರು ಸಮಾಜಕ್ಕೆ ನೀಡಿದ ಕೊಡುಗೆಗೆ ಸಾಕ್ಷಿಯಾಗಿದೆ. ಪೂಜ್ಯರು ತಮ್ಮ ಇಡೀ ಜೀವನದುದ್ದಕ್ಕೂ ಭಕ್ತರು, ಸಮಾಜಕ್ಕಾಗಿ ದುಡಿದವರಾಗಿದ್ದಾರೆ. ಸಿದ್ದಿಪುರಷ, ತ್ರಿಕಾಲ ಜ್ಞಾನಿ, ಮಹಾನ ತಪಸ್ವಿಗಳಾಗಿದ್ದರು. ಭಕ್ತರ ಹೃದಯಮಂದಿರದಲ್ಲಿ 'ಬಬಲಾದಿಯ ಭಗವಂತ'ನಾಗಿ ಉಳಿದಿದ್ದಾರೆ ಎಂದು ನುಡಿದರು.

    ಶ್ರೀಮಠದ ಭಕ್ತರು ಆದ ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಮಾತನಾಡಿ, ಚನ್ನವೀರ ಶಿವಯೋಗಿಗಳ ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಅವರ ದಾರಿಯಲ್ಲಿಯೇ ಸಾಗುವ ಮೂಲಕ ಭಕ್ತರಿಗೆ ನಿರಂತರವಾಗಿ ಹರಿಸುತ್ತಿರುವ ಪ್ರಸ್ತುತ ಪೀಠಾಧಿಪತಿಗಳಾದ ಗುರುಪಾದಲಿಂಗ ಮಹಾಶಿವಯೋಗಿಗಗಳು, ಕಾಯಕಯೋಗಿ, ಆಧ್ಯಾತ್ಮಿಕ ಶಿಖರ, ಕೃಷಿ ಪಂಡಿತ, ಅನೇಕ ಭಕ್ತರ ಆರಾಧ್ಯ ದೈವವಾಗಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಮಾಜಕ್ಕೆ ಸಲ್ಲಿಸುವ ಮೂಲಕ ಗುರು ಪರಂಪರೆಗೆ ಮಾದರಿಯಾಗಿದ್ದಾರೆ ಎಂದರು.

   ಪುಣ್ಯಸ್ಮರಣೋತ್ಸವ ಪ್ರಯುಕ್ತ ಲಿಂ.ಶ್ರೀ ಚನ್ನವೀರ ಮಹಾಶಿವಯೋಗಿಗಳ ಕೃತು ಗದ್ದುಗೆಗೆ ಬೆಳಗ್ಗೆ ವಿಶೇಷ ಪೂಜೆ, ರುದ್ರಾಭಿಷೇಕ, ವಾದ್ಯ-ಮೇಳಗಳೊಂದಿಗೆ ಸಾಯಂಕಾಲ ಪಲ್ಲಕ್ಕಿ ಉತ್ಸವ ಜರುಗಿತು. ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

  ದೇವಸ್ಥಾನ ಸಮಿತಿಯ ಸದಸ್ಯರು, ಪ್ರಮುಖರಾದ ರೇವಣಸಿದ್ದಯ್ಯ ಬೆಳಕೋಟಾ, ಕಾಡಯ್ಯಸ್ವಾಮಿ, ರೇವಣಸಿದ್ದಪ್ಪ ಪಿ.ಹುಡಗಿ, ಶಿವರಾಜ ಬಾಲಖೇಡ್, ಮಾಣಿಕ್ಕಪ ಮಿರಾಕಲ್ ಸೆಕರೆಟ್ರಿ, ಸಿದ್ದಣ್ಣ ಮಳದ್, ಜಗನಾಥ ಕಣ್ಣೂರ್, ಶರಣು ವರನಾಳ, ಮಹೇಶ, ಕಮಲಾಕರ್, ವೀರಣ್ಣ, ಚಿದಾನಂದ ಕವಲಗಿ, ಸಿದ್ರಾಮಪ್ಪ ಮಳದ್, ಅರ್ಜುನ ಪಟ್ಟಣ, ಶಿವಕುಮಾರ ಡಬರಾಬಾದ, ಸಿದ್ದಯ್ಯ, ದೇವೇಂದ್ರಪ್ಪ ಗಣಮುಖಿ, ಪರಮೇಶ್ವರ ದೇಸಾಯಿ, ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಭೀಮಾಶಂಕರ ಪೂಜಾರಿ ಸೇರಿದಂತೆ ಗ್ರಾಮ ಹಾಗೂ ಸುತ್ತಲಿನ ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಭಕ್ತರು ಭಾಗವಹಿಸಿದ್ದರು.