ಶ್ರೀ ಖಾಸ್ಗತ ಜಾತ್ರೋತ್ಸವಕ್ಕೆ ಶುಭ ಕೋರಿದ ಮುಸ್ಲಿಂ ಧರ್ಮಗುರು

ತಾಳಿಕೋಟೆ:ಜು.12: ಶ್ರೀ ಖಾಸ್ಗತೇಶ್ವರ ಮಠವು ಸುಮಾರು 14 ತಲೆಮಾರಿನಿಂದಲೂ ಭಾವೈಕ್ಯತೆಯೊಂದಿಗೆ ಸಾಗಿ ಬಂದಿದೆ ಎಂದು ಮುಸ್ಲಿಂ ಧರ್ಮಗುರು ಶ್ರೀ ಸೈಯದ ಶಕೀಲಅಹ್ಮದ ಖಾಜಿ ಅವರು ನುಡಿದರು.

ಸೋಮವಾರರಂದು ಶ್ರೀ ಖಾಸ್ಗತೇಶ್ವರ ಮಠಕ್ಕೆ ಬೆಟ್ಟಿ ನೀಡಿ ಅಲ್ಲಿಯ ಪೀಠಾಧಿಪತತಿಗಳಾದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರಿಗೆ ಸನ್ಮಾನಿಸಿ ಗೌರವಿಸಿ ಜಾತ್ರೋತ್ಸವ ಕುರಿತು ಶುಭಕೋರಿದ ಅವರು ಜಾತ್ರೋತ್ಸವ ಹಾಗೂ ಹಬ್ಬ ಹರಿದಿನಗಳು ಯಾವುದೇ ಒಂದು ಕೋಮಿಗೆ ಸೀಮಿತಪಟ್ಟವುಗಳಲ್ಲಾ ಅವುಗಳ ವ್ಯವಸ್ಥೆಯು ಭಾವೈಕ್ಯತೆ ಮೂಡಿಸುವಂತವುಗಳಾಗಿವೆ ಎಂದ ಅವರು ಶ್ರೀ ಖಾಸ್ಗತೇಶ್ವರ ಕಾಲದಲ್ಲಿ ಶ್ರೀ ಖಾಸ್ಗತರು ಸಹ ನಮ್ಮ ಧರ್ಮಿಯರ ಹಬ್ಬಗಳಲ್ಲಿ ಪಾಲ್ಗೊಂಡು ಯಾವುದೇ ಬೇದವಿಲ್ಲದೇ ನಮಾಜಕೂಡಾ ಮಾಡಿದ್ದಾರೆಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ ಅವರ ನಂತರವೂ ಸಹ ಶ್ರೀ ಶಿವಬಸವಶ್ರೀಗಳು, ವಿರಕ್ತ ಮಹಾಸ್ವಾಮಿಗಳೂ ಸಹ ಅವರದ್ದೇ ಪದ್ದತಿಯನ್ನು ಮುಂದುವರೆಸಿಕೊಂಡು ಬಂದಿದ್ದರೆಂದ ಖಾಜಿ ಅವರು ನಮ್ಮ ನಿಮ್ಮದು ಸಹ ಅದೇ ರೀತಿ ಭಾವೈಕ್ಯತೆ ಮುಂದುವರೆಯಲಿ ಎಂದು ಆಶಿಸಿದರು.

ಸನ್ಮಾನ ಸ್ವಿಕರಿಸಿದ ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಮಾತನಾಡಿ ಶತ ಶತಮಾನಗಳಿಂದಲೂ ಋಷಿ ಮುನಿಗಳು, ಸಾದು ಸಂತರು ತತ್ವ ಸಂದೇಶಗಳನ್ನು ಸಾರಿ ಸಮಾಜ ಎನ್ನುವದಕ್ಕೆ ಸನ್ಮಾರ್ಗ ತೋರಿದ್ದಾರೆ ಮನುಷ್ಯ ಮತ್ತು ಸಮಾಜ ಸುಖ ಸಮೃದ್ದಿ ಹಾಗೂ ಬೆಳವಣಿಗೆಗೆ ಧರ್ಮ ಸಂದೇಶಗಳನ್ನು ಪಾಲಿಸಬೇಕಾಗುತ್ತದೆ ಎಂದ ಅವರು ಅದೇ ನಿಟ್ಟಿನಲ್ಲಿ ಶ್ರೀ ಖಾಸ್ಗತ ಮಠಕ್ಕೆ 14 ಜನ ಪೀಠಾಧಿಪತಿಗಳು ಭಕ್ತೋದ್ದಾರ, ಜನೋದ್ದಾರಕ್ಕಾಗಿಯೇ ಶ್ರಮಿಸಿದ್ದಾರೆ ನಾನೂ ಕೂಡಾ ಭಾವೈಕ್ಯತೆಯ ಭಾವನೆಯೊಂದಿಗೆ ಮುನ್ನಡೆಯುತ್ತೇನೆಂದ ಶ್ರೀಗಳು ಇದೇ ತತ್ವ ಸಿದ್ದಾಂತ ಮುಂದುವರೆಯಲಿ ಎಂದು ಇತ್ತಿಚಗೆ ಜರುಗಿದ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.

ಈ ಸಮಯದಲ್ಲಿ ಮುಸ್ಲಿಂ ಧರ್ಮ ಗುರುವಿನ ಹಿರಿಯ ಸಹೋದರ ಸೈಯದಫಸೀಉದ್ದೀನ ಅಹ್ಮದ ಖಾಜಿ, ಪುರಸಭೆ ಮಾಜಿ ಸದಸ್ಯ ಅಬ್ದುಲ್‍ಗನಿಸಾಬ ಲಾಹೋರಿ, ಇದ್ಗಾ ಕಮಿಟಿ ಕಾರ್ಯದರ್ಶಿ ಅಬ್ದುಲ್‍ರಹೇಮಾನ ಏಕೀನ, ನಬಿರಸೂಲ ಲಾಹೋರಿ, ಸದ್ದಾಂ ಮನಗೂಳಿ, ನಬಿರಸೂಲ ಕುಂಭಾರವಾಡಿ ಮೊದಲಾದವರು ಪಾಲ್ಗೊಂಡಿದ್ದರು.