ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವ್ರದ್ಧಿ ಯೋಜನೆ

ರಿಮ್ಸ್ ಆಸ್ಪತ್ರೆಗೆ ೫ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳ ಕೊಡುಗೆ – ಹಸ್ತಾಂತರ
ರಾಯಚೂರು.ಜೂ.೦೨- ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವ್ರದ್ಧಿ ಯೋಜನೆಯ ವತಿಯಿಂದ ಪೂಜ್ಯ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಒದಗಿಸಿರುವ ಒಟ್ಟು ೫ ಹೊಸ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರಾಮಕ್ರಷ್ಣರವರು ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ರಿಮ್ಸ್ ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಇವರು ” ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವ್ರದ್ಧಿ ಯೋಜನೆಯು ನಿರಂತರವಾಗಿ ದುರ್ಬಲರ ಮತ್ತು ಅಸಾಹಯಕರ ಅಭಿವ್ರದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಟಾನಿಸುತ್ತಿದ್ದು, ಜನಜೀವನದ ಸುಧಾರಣೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಸಂಕಷ್ಟದ ಸಂದರ್ಭಗಳಲ್ಲಿ ಸದಾ ಸ್ಪಂದಿಸುವ ಮನೋಭಾವನೆ ಹೊಂದಿರುವ ಸಂಸ್ಧೆಯ ಅಧ್ಯಕ್ಷರಾದ ಪೂಜ್ಯ ಹೆಗ್ಗಡೆಯವರು ಮಾದರಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ರಾಜ್ಯದ ಆಯ್ದ ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ನೀಡುತ್ತಿರುವ ಹೆಗ್ಗಡೆಯವರು ನಿಜವಾಗಲೂ ಅಭಿನಂದನೆಗೆ ಅರ್ಹರು. ಇವರು ರಿಮ್ಸ್ ಆಸ್ಪತ್ರೆಗೂ ೫ ಹೊಸ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ನೀಡಿದ್ದು, ಇದನ್ನು ಇಂದು ನಾವು ಸ್ವೀಕರಿಸಿದ್ದೇವೆ. ಮುಂದಿನ ದಿನಗಳಲ್ಲೂ ಹೆಗ್ಗಡೆಯವರ ಸಮಾಜಮುಖಿ ಸೇವೆಗಳು ಹೀಗೆಯೇ ನಿರಂತರವಾಗಿ ಮುಂದುವರೆಯಲಿ” ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವ್ರದ್ಧಿ ಯೋಜನೆಯ ರಾಯಚೂರು ಜಿಲ್ಲಾ ನಿರ್ದೇಶಕರಾದ ಸಂತೋಷ್ ಕುಮಾರ್ ರವರು ಮಾತನಾಡಿ ” ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಜನರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವ್ರದ್ಧಿ ಯೋಜನೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ ಜಿಲ್ಲೆಯ ೧೮೦೦ ಅಸಾಹಯಕ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯಗಳ ಕಿಟ್ ಗಳನ್ನು ನೀಡಲಾಗಿದೆ. ಬಡ ಕೋವಿಡ್ ಸೋಂಕಿತರು, ಶಂಕಿತರು ಮತ್ತು ತೀವ್ರ ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಹೋಗಿಬರಲು ೪ ಉಚಿತ ವಾಹನದ ವ್ಯವಸ್ಧೆ ಮಾಡಲಾಗಿದ್ದು, ೧೬೦ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ೨೨೨ ಬಡ ಕುಟುಂಬಗಳಿಗೆ ಮಾಶಾಸನ ವಿತರಿಸಲಾಗಿದೆ.
ಮೈಸೂರು, ಬೆಳ್ತಂಗಡಿ ಮತ್ತು ಧಾರವಾಡದಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ. ರಾಜ್ಯದ ಆಯ್ದ ಆಸ್ಪತ್ರೆಗಳಿಗೆ ಆಕ್ಸಿಜನ್ ಮತ್ತು ವೈದ್ಯಕೀಯ ಉಪಕರಣಗಳನ್ನು ಉಚಿತವಾಗಿ ಒದಗಿಸಿಕೊಡಲಾಗಿದೆ. ೧,೬೦೦ ಜನರಿಗೆ ಊಟದ ಪೊಟ್ಟಣಗಳನ್ನು ಮಾಡಿ ವಿತರಿಸಲಾಗಿದೆ. ಜಿಲ್ಲೆಯ ಒಂದು ಲಕ್ಷ ಯೋಜನೆಯ ಸದಸ್ಯರಿಗೆ ಕೋವಿಡ್ ಜಾಗ್ರತಿಯ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ. ಕೋವಿಡ್ ವಿರುದ್ಧ ಲಸಿಕೆ ಹಾಕಿಕೊಳ್ಳುವ ಬಗ್ಗೆ ಸಂಸ್ಧೆಯ ವತಿಯಿಂದ ನಿರಂತರ ಜಾಗ್ರತಿ ಮೂಡಿಸಲಾಗುತ್ತಿದೆ. ಸಮಾಜ ಸೇವೆಯ ಒಂದು ಭಾಗವಾಗಿ ಯೋಜನೆಯ ಮೂಲಕ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ನೀಡಲಾಗುತ್ತಿದ್ದು, ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಒಟ್ಟು ೩೦೦ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಉಚಿತವಾಗಿ ಒದಗಿಸಲಾಗಿದೆ.
ಇದರಂತೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೂ ಒಟ್ಟು ೫ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಒದಗಿಸಲಾಗುತ್ತಿದ್ದು ಇಂದು ಇದನ್ನು ಆಸ್ಪತ್ರೆಗೆ ಹಸ್ತಾಂತರಿಸಿದ್ದೇವೆ. ಕೋವಿಡ್ ಬಾಧಿತರ, ತೀವ್ರ ಅನಾರೋಗ್ಯ ಪೀಡಿತರ ಉಪಯೋಗಕ್ಕಾಗಿ ಈ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಒದಗಿಸಲಾಗುತ್ತಿದ್ದು, ಇದರ ಸದುಪಯೋಗ ಆಗಲೆಂದು ಬಯಸುತ್ತೇವೆ. ಇದಲ್ಲದೇ ಮುಂದಿನ ದಿನಗಳಲ್ಲೂ ಸಂಸ್ಧೆಯ ಸಮಾಜ ಮುಖಿ ಸೇವೆ ನಿರಂತರವಾಗಿ ಮುಂದುವರೆಯಲಿದೆ.” ಎಂದು ಹೇಳಿದರು.
ಈ ಸಂದರ್ಭದಲ್ಲಿ ರಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಬಸವರಾಜ್ ಪಿ. ಪೀರಾಪುರ್, ಜಿಲ್ಲಾ ಸರ್ಜನ್‌ರಾದ ಡಾ.ವಿಜಯಶಂಕರ್, ಕಲ್ಲಪ್ಪ, ನಾಗರಾಜ್ ,ನಾಗೇಂದ್ರ ಸ್ವಾಮಿ, ಪ್ರವೀಣ್, ಆಸ್ಪತ್ರೆಯ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಉಪಸ್ಧಿತರಿದ್ದರು.