ಶ್ರೀ ಕ್ರಿಕೆಟರ್ಸ್ ಮುಡಿಗೇರಿದ ಅಪ್ಪು ಟ್ರೋಫಿ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ,ಜ.9- ಹೆಚ್.ಹನುಮಂತಪ್ಪ ಅಭಿಮಾನಿ ಬಳಗ, ಭೀಮರಾವ್ ಕ್ರಿಕೆಟರ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಇಲ್ಲಿನ ಶ್ರೀ ಕ್ರಿಕೆಟರ್ಸ್ ಗೆದ್ದುಕೊಂಡು ಅಪ್ಪು ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಶ್ರೀ ಕ್ರಿಕೆಟರ್ಸ್ ಮತ್ತು ಭೀಮರಾವ್ ಕ್ರಿಕೆಟರ್ಸ್ ನಡುವೆ ಪೈನಲ್ ಪಂದ್ಯ ಜರುಗಿತು. ಅಂತಿಮವಾಗಿ ಶ್ರೀ ಕ್ರಿಕೆಟರ್ಸ್ ತಂಡ ಗೆಲುವು ಸಾಧಿಸಿ, 50 ಸಾವಿರ ನಗದು ಬಹುಮಾನ ಟ್ರೋಫಿ ಪಡೆಯಿತು. ಭೀಮರಾವ್ ಕ್ರಿಕೆಟರ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿ 25 ಸಾವಿರ ರೂ. ನಗದು ಬಹುಮಾನ, ಟ್ರೋಫಿ ಪಡೆಯಿತು.
ಟೂರ್ನಿಯ ಉತ್ತಮ ಬೌಲರ್ ಕೊಟ್ರೇಶ ಕೊಟ್ಟೂರು, ಉತ್ತಮ ಬ್ಯಾಟ್ಸ್ ಮನ್ ಚಾರ್ಲಿ, ಸರಣಿಶ್ರೇಷ್ಠ ಆಟಗಾರ ಅಮೃತ ವೈಯಕ್ತಿಕ ಬಹುಮಾನ ಪಡೆದರು.
ಟೂರ್ನಿ ಆಯೋಜಕರಾದ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹೆಚ್.ಹನುಮಂತಪ್ಪ ಮಾತನಾಡಿ, ಈ ಭಾಗದಲ್ಲಿ ಉತ್ತಮ ಕ್ರಿಕೆಟ್ ಆಟಗಾರರಿದ್ದು, ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ದೇಸಿ ಕ್ರೀಡೆಗಳನ್ನು ಆಯೋಜಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೆಚ್.ಪೂಜಪ್ಪ ಮಾತನಾಡಿ, ಯುವ ಪೀಳಿಗೆ ಆರೋಗ್ಯಕ್ಕೆ ಮಾರಕವಾಗಿರುವ ಗುಟ್ಕಾ ನಿಷೇಧಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಯುವಕರು ದುಶ್ಚಟಗಳನ್ನು ಬಿಟ್ಟು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಟಗಬೇಕು ಎಂದು ತಿಳಿಸಿದರು.
ಮುಖಂಡರಾದ ಎಂ.ಬಿ.ಬಸವರಾಜ, ಬೀರಬ್ಬಿ ಬಸವರಾಜ, ಪಿ.ಎಂ.ವಿಲ್ಸನ್ ಸ್ವಾಮಿ, ಪರಶುರಾಮ ಕಲಾಲ್, ಪತ್ರೆಪ್ಪ ಮಾತನಾಡಿದರು. ಪತ್ರಿಬಸಪ್ಪ ಇದ್ದರು.