ಶ್ರೀ ಕೈಕಾಡಿ ಮಹಾರಾಜ ಜಯಂತಿ ಹಾಗೂ ಶ್ರೀರಾಮ ನವಮಿ ನಿಮಿತ್ಯ ರಕ್ತದಾನ ಶಿಬಿರ

ಬೀದರ:ಎ.1: ಶ್ರೀ ಕೈಕಾಡಿ ಮಹಾರಾಜ ಅವರ 115ನೇ ಜಯಂತಿ ಉತ್ಸವ ಹಾಗೂ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ನೌಬಾದನ ಶ್ರೀ ಕೈಕಾಡಿ ಮಹಾರಾಜ ಮಂದಿರದಲ್ಲಿ ಬೀದರ ಜಿಲ್ಲಾ ಕೊರಮ (ಕೊರವ)ರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಉಚಿತ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಮಾದರಿ ಕಾರ್ಯವಾಗಿದೆ ಎಂದು ಯುವ ಮುಖಂಡರಾದ ಮಹೇಶ ಮೈಲಾರೆ ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ಇಂದಿನ ಕಾಲದಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದೆ. ಮಹಾತ್ಮರ ಜಯಂತಿ ಉತ್ಸವದ ಪ್ರಯುಕ್ತ ಯುವಕರು ಇನ್ನೊಂದು ಜೀವ ಉಳಿಸಲು ಪ್ರಪ್ರಥಮ ಬಾರಿಗೆ ಉಚಿತ ರಕ್ತದಾನ ಮಾಡಿದ್ದು ಇತರರಿಗೂ ಆದರ್ಶಪ್ರಾಯವಾಗಿದೆ. ಸಂಘದ ಈ ಕಾರ್ಯಕ್ಕೆ ನನ್ನ ಸಹಕಾರ ನಿರಂತರವಾಗಿ ಇರುತ್ತದೆ ಎಂದು ಮೈಲಾರೆ ತಿಳಿಸಿದರು.

ನಗರಸಭೆ ಸದಸ್ಯರಾದ ಸಂಗಮೇಶ ಪಾಟೀಲ ಮಾತನಾಡಿ ರಕ್ತದಾನದಿಂದ ಅದೆಷ್ಟೋ ಬಡಜೀವಗಳ ಪ್ರಾಣ ಉಳಿಯುತ್ತದೆ. ದುರ್ಗುಣ, ದುಶ್ಚಟಗಳಿಗೆ ಬಲಿಯಾಗುತ್ತಿರುವ ಇಂದಿನ ಯುವಕರಲ್ಲಿ ಬೀದರ ಜಿಲ್ಲಾ ಕೊರಮ (ಕೊರವ) ಕ್ಷೇಮಾಭಿವೃದ್ಧಿ ಸಂಘದ ಯುವಕರು ಮಾದರಿ ಕಾರ್ಯ ಮಾಡಿದ್ದಾರೆ ಎಂದು ಪಾಟೀಲ ತಿಳಿಸಿದರು.

ಇದೇ ವೇಳೆ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಡಿ. ಕೊರವ, ಕಾರ್ಯದರ್ಶಿ ಸಂಜೀವಕುಮಾರ ಬೇಲೂರ, ರವಿ ಭಂಗೆ, ಪ್ರಸಾದ, ಪವನ, ತುಕಾರಾಮ, ರಾಜಕುಮಾರ ಗಾದಗಿ ಸೇರಿದಂತೆ ಇನ್ನಿತರ ಯುವಕರು ರಕ್ತದಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ನೌಬಾದ ಗ್ರಾಮದ ಯುವ ಮುಖಂಡರಾದ ಸಂತೋಷ ಪಾಟೀಲ, ಸಂಘದ ಉಪಾಧ್ಯಕ್ಷರಾದ ಸಂಜೀವಕುಮಾರ ಯರಂಡಿ, ಖಜಾಂಚಿ ಮಲ್ಲಿಕಾರ್ಜುನ ನೌಬಾದ, ಉದಗೀರ ಟೈಗರ್ ಗ್ರೂಪ್‍ನ ಅಧ್ಯಕ್ಷರಾದ ವಿಲಾಸ ಮಾನೆ ಸೇರಿದಂತೆ ಸಮುದಾಯದ ಹಲವಾರು ಮುಖಂಡರು ಹಾಜರಿದ್ದರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಬೇಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.