ಶ್ರೀ ಕೇತೇಶ್ವರ ಸ್ವಾಮಿಗಳ ಜಯಂತ್ಯೋತ್ಸವ : ಅದ್ದೂರಿ ಮೆರವಣಿಗೆ

ಹುಬ್ಬಳ್ಳಿ, ನ 29: ನಗರದ ಹಳೇ-ಹುಬ್ಬಳ್ಳಿ ಮೇದಾರ ಸಮಾಜದ ವತಿಯಿಂದ ಗೌರಿ ಹುಣಿಮೆ ದಿನದಂದು ಮೇದಾರ ಸಮಾಜ ಕುಲಗುರುಗಳಾದ ಶ್ರೀ ಶಿವಶರಣ ಮೇದಾರ ಕೇತೇಶ್ವರ ಸ್ವಾಮಿಗಳ 893ನೇ ಜಯಂತ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ನಗರದ ಶ್ರೀ ಮೂರುಸಾವಿರ ಮಠದ ಆವರಣದಲ್ಲಿ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ಶ್ರೀ ಕೇತೇಶ್ವರಸ್ವಾಮಿಗಳ ಭಾವಚಿತ್ರ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಿದರು.

ಮೆರವಣಿಗೆಯು ಮೂರುಸಾವಿರ ಮಠದಿಂದ ಶ್ರೀ ತುಳಜಾಭವಾನಿ ದೇವಸ್ಥಾನ ಸರ್ಕಲ್, ಹೊಸ ಹುಬ್ಬಳ್ಳಿ ಮೇದಾರ ಓಣಿ, ದುರ್ಗದ ಬೈಲ್ ಸರ್ಕಲ್, ಜವಳಿ ಸಾಲ್ ರಸ್ತೆ, ಘಂಟಿಕೇರಿ ಸರ್ಕಲ್ ಮೂಲಕ ಸಾಗಿ ಹಳೇ-ಹುಬ್ಬಳ್ಳಿ ಮೇದಾರ ಓಣಿಗೆ ತಲುಪಿತು. ಮುತ್ತೈದೆಯರಿಂದ ಕುಂಭ ಕಳಸ ಹೊತ್ತು ಸಾಗಿದ ಮೆರವಣಿಗೆ ಮತ್ತು ವಾದ್ಯ ಮೇಳ ವೈಭವದಿಂದ ಕೂಡಿತ್ತು.

ಶ್ರೀ ಕೇತೇಶ್ವರ ಸ್ವಾಮಿಜೀಕಿ ಜೈ ಎನ್ನುವ ನಿನಾದ ಎಲ್ಲೆಡೆ ಮೊಳಗಿತು. ಇದೇ ಸಂದರ್ಭದಲ್ಲಿ ಹೊಸ ಹುಬ್ಬಳ್ಳಿ ಮೇದಾರ ಸಮಾಜದ ವತಿಯಿಂದ ಸಮಾಜದ ಗಣ್ಯರಿಗೆ ಸನ್ಮಾನ ಮಾಡಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಸಂಜೆ ಶ್ರೀ ಹನುಮಯ್ಯಸ್ವಾಮಿಗಳ ಮಠದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮ ನೆರವೇರಿದ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮೇದ ಗಿರಿಜನಾಂಗದ ಕಲ್ಯಾಣ ಸೇವಾ ಸಂಘದ ಅಧ್ಯಕ್ಷರಾದ ವಾಯ್.ಕೆ. ಹಳಪೇಟಿ, ಹುಬ್ಬಳ್ಳಿ ಮೇದಾರ ಸಮಾಜದ ಅಭ್ಯುದಯ ಸಂಘದ ಅಧ್ಯಕ್ಷರಾದ ಮಂಜುನಾಥ ಹೆಬ್ಬಳ್ಳಿ, ಗೌರವ ಅಧ್ಯಕ್ಷರಾದ ಶಂಕರ ಮಿಶ್ರಿಕೋಟಿ, ಹನುಮಂತ ಸವಣೂರ, ರಮೇಶ ಹುಲಕೊಪ್ಪ, ಸುರೇಶ ಸವಣೂರ, ಸುಭಾಸ್ ಹೆಬ್ಬಳ್ಳಿ, ರಮೇಶ್ ಕೆರೂರ, ಮನೋಹರ ಸವಣೂರು, ಸದಾಶಿವ ಗದಗ, ಅರ್ಜುನ ಕಲಘಟಗಿ, ಚಂದ್ರು ಕೋಟಿ, ನಾಗರಾಜ ಗಾಮನಗಟ್ಟಿ, ಮಹಾದೇವ ಹೆಬ್ಬಳ್ಳಿ, ಪ್ರಸಾದ ಅಮ್ಮಿನಬಾವಿ, ದೀಪಕ ಗುಗ್ಗರಿ, ನಾಗರಾಜ ಅರಳಿಕಟ್ಟಿ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.