ಶ್ರೀ ಕೃಷ್ಣ ಜನ್ಮಾಷ್ಠಮಿ; ಕೃಷ್ಣನ ವೇಷಭೂಷಣದಲ್ಲಿ ಕಂಗೊಳಿಸಿದ ಚಿಣ್ಣರು

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೬; ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ದಾವಣಗೆರೆಯ ಹಲವು ಶಾಲೆಗಳಲ್ಲಿ ಶ್ರೀ ಕೃಷ್ಣನ ವೇಷಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ಕೃಷ್ಣ ಹಾಗೂ ರಾಧೆಯ ವೇಷಭೂಷಣ ಧರಿಸಿದ ಚಿಣ್ಣರು ನೆರೆದಿದ್ದವರ ಗಮನಸೆಳೆದಿದ್ದು ವಿಶೇಷವಾಗಿತ್ತು.ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಆಚರಿಸಲಾಗುತ್ತದೆ. ಕೃಷ್ಣನ ಜನ್ಮ ದಿನವಾದ ಅಷ್ಟಮಿಯಂದು ಶ್ರೀ ಕೃಷ್ಣನ ಪುಟ್ಟ ಹೆಜ್ಜೆಗಳನ್ನು ಮನೆಯಲ್ಲಿ ಮೂಡಿಸಿ,  ಮುರಾರಿಯ  ಮೂರ್ತಿಯನ್ನು ಪ್ರತಿಷ್ಠಾಪಿಸಿ, , ಹಾಲು, ಬೆಣ್ಣೆ, ಮೊಸರು, ಅವಲಕ್ಕಿ,  ವಿವಿಧ ಬಗೆಯ ಕರಿದ ತಿಂಡಿಗಳನ್ನು ದೇವರಿಗೆ ನೈವೇದ್ಯ ಮಾಡಿ, ಅಷ್ಟದೀಪ, ಪಂಚಗವ್ಯ ದೀಪಾರಾಧನೆ,  ಧೂಪಾರಾಧನೆ ಮಾಡಿ, ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ಹಂಚಲಾಗುವುದು. ಕೃಷ್ನನ ಜನ್ಮದಿನವಾದ ಇಂದು ಬಾಲ ಕೃಷ್ಣನನ್ನು ತೊಟ್ಟಿಲಿಗೆ ಹಾಕಿ ತೂಗುವರು. ವಿಷ್ಣುವಿನ 8 ನೇ ಅವತಾರವಾದ ಕೃಷ್ಣನಿಗೆ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ, ಪೂಜೆ ಮಾಡಿ, ಭಕ್ತರು ಸಂಭ್ರಮಿಸುವರು. ಗೋಪಿಕಾ ಪ್ರಿಯನಾದ ಕೃಷ್ಣನ ಹಾಗೂ ರಾಧೆಯ ವೇಷವನ್ನು ಮಕ್ಕಳಿಗೆ ಹಾಕಿ ಮಕ್ಕಳಲ್ಲಿಯೇ ಕೃಷ್ಣನನ್ನು ನೋಡುವ ಪ್ರಯತ್ನವನ್ನು ಮಾಡಲಾಗುವುದು.ಈ ದಿನ ಶಾಲೆಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ, ನಮ್ಮ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ. ಆ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಸಂಪ್ರದಾಯಗಳನ್ನು ಹೇಳಿಕೊಡಲಾಗುವುದು. ಕೃಷ್ಣ ಜನ್ಮಾಷ್ಟಮಿ ಆಚರಣೆ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ…. ದೇಶದೆಲ್ಲೆಡೆ ಆಚರಿಸಲಾಗುವುದು. ಇಸ್ಕಾನ್ ಕೃಷ್ಣ ದೇವಾಲಯದಲ್ಲಿ ಇಂದು ವಿಶೇಷ ಪೂಜೆ ನೆರವೇರಲಿದ್ದು, ದಾವಣಗೆರೆ ಘಟಕದಿಂದಲೂ ಸಂಭ್ರಮದ ಆಚರಣೆ ನಡೆಯುತ್ತದೆ. ಮನೆ ಮನೆಗಳಲ್ಲೂ ಮುಕುಂದ, ಮಾಧವ, ವಾಸುದೇವ, ಗೋಪಾಲನ ಆರಾಧನೆ ಸಂಭ್ರಮದಿಂದ ನಡೆಯಿತು.