ಶ್ರೀ ಕೃಷ್ಣ ಜನ್ಮಭೂಮಿ ವಿವಾದ ವಿಚಾರಣೆಗೆ ಹೈ ಕೋರ್ಟ್ ತಡೆ


ಪ್ರಯಾಗ್‌ರಾಜ್,ಆ.೪- ಮಥೂರಾದ ಶಾಹಿ ಈದ್ಗಾ ಮಸೀದಿ ಸ್ವಾಧೀನದಲ್ಲಿದೆ ಎನ್ನಲಾಗಿರುವ ಶ್ರೀಕೃಷ್ಣನ ನೈಜ ಜನ್ಮಸ್ಥಳದಲ್ಲಿ ಭಕ್ತರು ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಿ ಕೆಳ ಹಂತದ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.
ಮುಂದಿನ ವಿಚಾರಣೆ ವೇಳೆಗೆ ಪ್ರತಿವಾದಿಗಳು ಅಫಿಡವಿಟ್ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ವಿಚಾರಣೆಯನ್ನು ನ್ಯಾಯಾಲಯದ ರಿಜಿಸ್ಟ್ರಾರ್ ಮುಂದಿನ ದಿನಗಳಲ್ಲಿ ನಿಗದಿಪಡಿಸಲಿದ್ದಾರೆ ಎಂದು ಕೋರ್ಟ್ ತಿಳಿಸಿದೆ.
ಮೇ ೧೯, ೨೦೨೦ ರಂದು ಮಥೂರಾ ಜಿಲ್ಲಾ ನ್ಯಾಯಾಧೀಶರು ನೀಡಿದ ಆದೇಶ ಪ್ರಶ್ನಿಸಿ ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಲೀಲ್‌ಕುಮಾರ್ ರೈ ಈ ಆದೇಶ ಹೊರಡಿಸಿದ್ದಾರೆ.
ಪೂಜೆಗೆ ಅವಕಾಶ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡುವಂತೆಯೂ ವಿಚಾರಣಾ ನ್ಯಾಯಾಲಯಕ್ಕೆ ಮಥೂರಾ ಜಿಲ್ಲಾ ನ್ಯಾಯಾಧೀಶರು ಮೇ ೧೯ ರಂದು ನಿರ್ದೇಶನ ನೀಡಿದ್ದರು.