ಕಾಳಗಿ. ಎ.29. ಭಂಟನಳ್ಳಿ ಶ್ರೀ ಕಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮುಂಜಾನೆ ಬೆಳ್ಳಗೆ ಪ್ರಭಾವಳಿ ಉತ್ಸವ ಶ್ರೀ ಶಾಂತಯ್ಯ ಮುತ್ಯಾ ಮಠಪತಿ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ದೇವರ ದರ್ಶನ ಪಡೆದು ಅಗ್ನಿಪ್ರವೇಶ ಮಾಡುವ ಮೂಲಕ ಹರಕೆ ತೀರಿಸಿದ ಭಕ್ತರು, ತೆಂಗಿನ ಕಾಯಿ ಒಡೆದು ಕೃತಾರ್ಥರಾದರು. ಎರಡು ಬೃಹತ ಮರದ ದಿನ್ನೇಗಳ ಮೇಲೆ ಮರದ ಹಲಿಗೆ ಜೋಡಿಸಿ ಅದರ ಮೇಲೆ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಮೂರ್ತಿಯನ್ನು ವಿವಿಧ ಅಲಂಕಾರಿಕವಸ್ತುಗಳಿಂದ ಸಿಂಗಾರಿಸಲಾಗಿತ್ತು.
ಬೆಳ್ಳಗೆ 8 ರಿಂದ 11 ರ ವರೆಗೆ ಗ್ರಾಮದ ಪ್ರಮುಖ ಬಿದಿಗಳಲ್ಲಿ ಪ್ರಭಾವಳಿಯ ಮೆರವಣಿಗೆ ಆರಂಭವಾಯಿತು. ವಾದ್ಯಮೇಳದೊಂದಿಗೆ ಜೋಡು ಪಲ್ಲಕ್ಕಿ ಮೆರವಣಿಗೆ ಮುಂದೆ ಸಾಗುವ ಮೂಲಕ ಸಂಭ್ರಮ ಹೆಚ್ಚಿಸಿತು. ಪ್ರಭಾವಳಿಯಲ್ಲಿ ಒಬ್ಬ ಸ್ವಾಮೀಜಿ ನಿಂತು ಭಾರವನ್ನು ಸ್ಥಾನಪಲ್ಲಟದ ಮೂಲಕ ಸರಿದೂಗಿಸಿ ಮೆರವಣಿಗೆಗೆ ಮೆರುಗು ತಂದರು.
ಬಿಳಿ ಲುಂಗಿ, ಬಿಳಿ ಬನಿಯನ್ ಹಾಗೂ ಟವೆಲ್ ಧರಿಸಿದ ಭಂಟನಳ್ಳಿ ಯುವಕರ ಎರಡು ಗುಂಪು ಪ್ರಭಾವಳಿಯ ಒಂದೊಂದು ದಿನ್ನೆ ಹೊತ್ತು ಮೇಲೆ – ಕೆಳಗೆ, ಹಿಂದೆ – ಮುಂದೆ ಮಾಡುವ ಮೂಲಕ ಸುಮಾರು ಒಂದು ಕಿ. ಮೀ ದೂರದ ಕಲ್ಲಾಲಿಂಗೇಶ್ವರ ತೇರ್ ಮೈದಾನಕ್ಕೆ ತಂದರು.
ತೇರ್ ಮೈದಾನದಲ್ಲಿ ಪ್ರಭಾವಳಿ ಅಗ್ನಿ ಕುಂಡಕ್ಕೆ ಐದು ಸುತ್ತು ಹಾಕಿ ಭೂಸ್ಪರ್ಶ ಮಾಡುತ್ತಿದಂತೆ ನೆರೆದ ಜನಸ್ತೋಮಭೂಮಿಗೆ ನಮಸ್ಕಾರ ಹಾಕಿದರು. ನಂತರ ಭಕ್ತರು ಪುರವಂತರ ಶಸ್ತ್ರ ಪ್ರಯೋಗ ನಡೆಸಿ ಕೆಂಡದ ಮೇಲೆ ನಡೆಯುವ ಮೂಲಕ ಅಗ್ನಿಪ್ರವೇಶ ಚಾಲನೆ ನೀಡಿದರು.