
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.07 : ತಾಲೂಕಿನ ಉತ್ತನೂರು ಗ್ರಾಮದಲ್ಲಿ ದವನದ ಹುಣ್ಣಿಮೆಯ ದಿನದಂದು ಶ್ರೀ ಉತ್ತರೇಶ್ವರ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಸಂಪ್ರದಾಯಿಕವಾಗಿ ಉತ್ಸವ ಮೂರ್ತಿಯನ್ನು ಮತ್ತು ದೇವಸ್ಥಾನ ಅಲಂಕಾರ ಮಾಡಲಾಗಿತ್ತು. ದ್ಯಾವಮ್ಮ ದೇವಿ ದೇವಸ್ಥಾನದಿಂದ ಸಣ್ಣ ತೆರನ್ನು ಡೊಳ್ಳು ಮತ್ತು ಮೇಳ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಂದು ಸಣ್ಣ ತೆರನ್ನು ಎಳೆಯಲಾಯಿತು, ವಿಶೇಷ ಪೂಜಾ ಕಾರ್ಯಗಳು ನಡೆದವು.
ಸಂಜೆ 6 ಗಂಟೆಗೆ ಶ್ರೀ ಉತ್ತರೇಶ್ವರ ಸ್ವಾಮಿಯ ರಥಕ್ಕೆ ಭಕ್ತರು ಭಕ್ತಿಯಿಂದ ತಂದಂತಹ ವೈವಿದ್ಯಮಯ ಹೂವಿನ ಹಾರಗಳು ಹಾಗೂ ತಳಿರು ತೋರಣದಿಂದ ರಥಕ್ಕೆ ಅಲಂಕಾರ ಮಾಡಲಾಗಿತ್ತು. ಕಳಸ ಮತ್ತು ಛತ್ರಿ ಅರೋಹಣ ಮಾಡಲಾಯಿತು. ಶ್ರೀ ಉತ್ತರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕ ಅವರು ರಥದಲ್ಲಿ ಅಸೀನರಾಗುತ್ತಿದ್ದಂತೆ ಜಾತ್ರೆಯಲ್ಲಿ ನೆರೆದಿದ್ದ ಭಕ್ತರು ದೇವರ ಜಯ ಘೋಷ ಕೂಗಿ, ರಥ ಎಳೆದು ಹೂ ಹಣ್ಣು ಎಸದು ಭಕ್ತಿ ಭಾವ ಮೆರೆದರು.