ಶ್ರೀ ಉಡುಚಲಾಪರಮೇಶ್ವರಿಗೆ ವಿಶೇಷ ಪೂಜೆ


ಸಂಜೆವಾಣಿ ವಾರ್ತೆ
ಸಂಡೂರು : ಅ:16: ಸಂಡೂರು ತಾಲೂಕಿನ ಅರಾಧ್ಯ ದೈವವಾದ ಶ್ರೀ ಉಡುಚಲಾಪರಮೇಶ್ವರಿ ದೇವಿಗೆ ದಸರಾದ ಒಂಭತ್ತು ದಿನಗಳು ಸಹ ವಿಶೇಷಪೂಜೆಯನ್ನು ನೆರವೇರಿಸಲಾಗುತ್ತದೆ, ಮೊದಲನೆಯ ದಿನದಂದು ವಿಶೇಷವಾಗಿ ದೇವಿಗೆ ಪ್ರಿಯವಾದ ಆರಿಷಿನ ಕುಂಕುಮದ ಅಲಂಕಾರವನ್ನು ಮಾಡುವ ಮೂಲಕ ನವರಾತ್ರಿ 9 ದಿನಗಳ ವಿಶೇಷಪೂಜೆಯನ್ನು ಪ್ರಾರಂಭಿಸಲಾಯಿತು.
ಬೆಳಿಗ್ಗೆ ವಿಶೇಷ ಪೂಜೆಯ ನಂತರ ಮಧ್ಯಾಹ್ನ ನವರಾತ್ರಿಯ ಅಂಗವಾಗಿ ಅರಿಷಿಣ ಕುಂಕುಮದ ಪೂಜೆಯನ್ನು ನೆರವೇರಿಸಿದರು, ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಘೋರ್ಪಡೆ ವಂಶಸ್ಥರಾದ ಸೂರ್ಯಾಪ್ರಭಾ ಘೋರ್ಪಡೆಯವರು ಅಗಮಿಸಿ ದೇವಿಗೆ ಪೂಜೆಯನ್ನು ಸಲ್ಲಿಸಿ ಮಹಾಮಂಗಳಾರತಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ನಂತರ ಭಕ್ತರು ಸರತಿಯ ಸಾಲಿನಲ್ಲಿ ಸಾಗಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ದಸರಾ ಉತ್ಸವದ 9 ದಿನಗಳಲ್ಲಿ ವಿಶೇಷವಾಗಿ ಅರಿಷಿಣ ಕುಂಕುಮ ಪೂಜೆ, 2ನೇ ದಿನ ಕೊಬ್ಬರಿಯ ಅಲಂಕಾರ, 3ನೇ ದಿನ ಬುಧವಾರ ನವಧಾನ್ಯಗಳ ಪೂಜೆ ಹಾಗೂ ಅಲಂಕಾರ, 4ನೇ ದಿನ ಗುರುಬಾರ ವೀಳ್ಯೆದೆಲೆಯ ಪೂಜೆ, 5ನೇ ದಿನ ಶುಕ್ರವಾರ ಹಣ್ಣಿನ ಪೂಜೆ, 6ನೇ ದಿನ ಶನಿವಾರ ಬುತ್ತಿಯ ಪೂಜೆ, 7ನೇ ದಿನ ಭಾನುವಾರ ಒಣ-ದ್ರಾಕ್ಷಿ ಇತರ ಹಣ್ಣಿನ ಪೂಜೆ, 8ನೇ ದಿನ ಸೋಮುವಾರ ಶ್ರೀಗಂಧದ ಪೂಜೆ, 9ನೇ ದಿನ ಸರ್ವ ಆಭರಣಗಳ ಅಲಂಕಾರ ಪೂಜೆಯನ್ನು ನೆರವೇರಿಸಲಾಗುತ್ತದೆ. ಪ್ರತಿದಿನ ಬೆಳಗಿನಿಂದ ಸಂಜೆಯವರೆಗೂ ಸಹ ಭಕ್ತರು ಸಾಲುಗಟ್ಟಿ ದೇವಿಯ ದರ್ಶನವನ್ನು ಪಡೆದು ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ.