ದಾವಣಗೆರೆ,ಏ.10; ತಾಲ್ಲೂಕಿನ ಕೋಲ್ಕುಂಟೆ ಗ್ರಾಮದ ಶ್ರೀ ಈಶ್ವರಾಂಜನೇಯಸ್ವಾಮಿ ಮಹಾ ರಥೋತ್ಸವವು ವಿಜೃಂಭಣೆಯಿಂದ ಜರುಗಲಿದೆ.ರಥೋತ್ಸವದ ಅಂಗವಾಗಿ ಪಂಚಮಿ ತಿಥಿಯಲ್ಲಿ ಸೀತಾರಾಮ ಕಲ್ಯಾಣ ಉತ್ಸವ, ಭಜನೆ, ಕೋಲಾಟ, ಡೊಳ್ಳು, ಹಲಗೆ ಮೇಳ ಮೊದಲಾದ ಮಂಗಳವಾದ್ಯಗಳೊಂದಿಗೆ ಶ್ರೀ ಈಶ್ವರಾಂಜನೇಯಸ್ವಾಮಿ ಮಹಾ ರಥೋತ್ಸವ ನಡೆಯಲಿದೆ.ರಥೋತ್ಸವದ ನಂತರ ಜವಳ, ದೀಡು ನಮಸ್ಕಾರ ಮೊದಲಾದ ಹರಕೆ ಕಾರ‍್ಯಕ್ರಮ ಹಾಗೂ ಸಂಜೆ 7 ಗಂಟೆಗೆ ಓಕಳಿ ಕಾರ‍್ಯಕ್ರಮ ನಡೆಯಲಿದೆ. ರಥೋತ್ಸವಕ್ಕೆ ಬರುವ ಭಕ್ತಾಧಿಗಳಿಗೆ ಪ್ರತಿವರ್ಷದಂತೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಗ್ರಾಮದ ಶ್ರೀ ಬಸವೇಶ್ವರ ನಾಟ್ಯ ಕಲಾ ಸಂಘದಿಂದ ಸದಾಶಿವ ಹೆಚ್.ಚನಾಳ್ ವಿರಚಿತ ಸಿಡಿದೆದ್ದ ರೈತ ಅರ್ಥಾತ್ ದುಷ್ಟರ ಸಾಮ್ರಾಜ್ಯ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದ್ದು, ಗ್ರಾಮದ ನಿವೃತ್ತ ಶಿಕ್ಷಕ ಚನ್ನಬಸಯ್ಯ ಉದ್ಘಾಟಿಸಲಿದ್ದಾರೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಗ್ರಾಮಸ್ಥರು ಕೋರಿದ್ದಾರೆ.