ಶ್ರೀಸಿದ್ಧರಾಮೇಶ್ವರ ರಥೋತ್ಸವ ಅದ್ದೂರಿ

ದೇವದುರ್ಗ.ನ.೨೬-ಭಕ್ತರ ಆರಾಧ್ಯದೈವ ಪಟ್ಟಣದ ಮಹಾತ್ಮಗಾಂಧಿ ವೃತ್ತ ಸಮೀಪರುವ ಶ್ರೀಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ಗುರುವಾರ ಸಂಜೆ ಅದ್ದೂರಿಯಾಗಿ ಜರುಗಿತು.
ಜಾತ್ರೆ ನಿಮಿತ್ತ ಶ್ರೀಮಠದ ಮುಖ್ಯಸ್ಥರಾದ ಶ್ರೀಕಪಿಲ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ಬೆಳಗ್ಗೆ ವಿಶೇಷ ಪೂಜೆ ಜರುಗಿದವು. ದೇವರಿ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿ ವಿವಿಧ ಪೂಜಾ ಕೈಂ ಕಾರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ನಂತರ ಭಕ್ತರು ಕಾಯಿ, ನೈವೇದ್ಯ ಅರ್ಪಿಸಿದರು.
ಮಹಿಳೆಯರು ಹಾಗೂ ಮಕ್ಕಳು ಬೆಳಗ್ಗೆ ದೇವಸ್ಥಾನ ಮುಂಭಾಗ, ರಥೋತ್ಸವ ಜರುಗುವ ರಸ್ತೆ ಉದ್ದಕ್ಕೂ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಗಮನ ಸೆಳೆದರು. ಸಂಜೆ ಶ್ರೀಮಠದಿಂದ ಮಹಾರಥೋತ್ಸವ ಶಾಂತಿಯುತವಾಗಿ ಜರುಗಿತು. ಭಕ್ತರು ರಥೋತ್ಸವಕ್ಕೆ ಮಂಡಾಳು, ಉತ್ತುತ್ತಿ, ಹೂವು ಅರ್ಪಿಸಿದರು. ರಥೋತ್ಸವ ಮೆರವಣಿಗೆಯಲ್ಲಿ ಕಲಾವಿದರ ಭಾಜ ಭಜಂತ್ರಿ, ನೃತ್ಯ ಗಮನಸೆಳೆಯಿತು.
ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿ, ತಾಂಡಾ, ದೊಡ್ಡಿಯಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಮುಂಜಾಗೃತೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ರಾಜಕೀಯ ಮುಖಂಡರು, ಗಣ್ಯರು ಭಾಗವಹಿಸಿದ್ದರು.