ಶ್ರೀಶೈಲಾ ಪಾದಯಾತ್ರಿಗಳಿಗೆ ಭಕ್ತರಿಂದ ಅನ್ನಸಂತರ್ಪಣೆ, ಔಷಧಿ ವಿತರಣೆ

ಸಿರವಾರ.ಮಾ೧೩- ಯುಗಾದಿ ಹಬ್ಬಕ್ಕಾಗಿ ಆಂಧ್ರಪ್ರದೇಶದ ಶ್ರೀಶೈಲಾ ಮಲ್ಲಿಕಾರ್ಜುನ ದರ್ಶನಕ್ಕೆ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆಯ ಮೂಲಕ ತೆರಳುವವರಿಗೆ ಸಿರವಾರ ಪಟ್ಟಣದ ಶ್ರೀಶೈಲಾ ಮಲ್ಲಯ್ಯ ಭಕ್ತರಿಂದ ಅನ್ನಸಂತರ್ಪಣೆ, ಉಚಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆ ಕಳೆದ ಮೂರು ದಿನಗಳಿಂದ ಪ್ರಾರಂಭವಾಯಿತು.
ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಪೇಟ್ರೋಲ್ ಬಂಕ್ ಹತ್ತಿರ ಕಳೆದ ಮೂರು ದಿನಗಳ ಕಾಲ ಅನ್ನ ದಾಸೋಹ, ಔಷದಿ ವಿತರಣೆ ಜರುಗಿದ್ದೂ, ಎರಡು ದಿನಗಳ ಕಾಲ ಸೇವೆ ಇರುತ್ತದೆ. ಸಿರವಾರ ಮಾರ್ಗವಾಗಿ ಬೇರೆ ಬೇರೆ ಜಿಲ್ಲೆ, ಭಾಗದಿಂದ, ಬಾಗಲಕೋಟೆ, ಇನ್ನಿತರ ಕಡೆಯಿಂದ ಪ್ರತಿ ವರ್ಷ ಸಾವಿರಾರು ಜನರು ಪಾದಯಾತ್ರೆಯ ಮೂಲಕ ಸಾಗುತ್ತಿದ್ದರು.
ಅವರಿಗೆ ನೀರು, ಆಹಾರ, ತಂಪು ಪಾನಿಯ, ಹಣ್ಣುಗಳನ್ನು, ಕಾಲು ನೋವು, ಜ್ವರ ಇನ್ನಿತರ ಸಮಸ್ಯೆಗಳಿಗೆ ಸರ್ಕಾರಿ ಆಸ್ಪತ್ರೆಯ ನರ್ಸಗಳು ಆರೊಗ್ಯ ವಿಚಾರಿಸಿ, ಮಾತ್ರೆಗಳನ್ನು ನೀಡುತ್ತಿದ್ದಾರೆ. ೮-೧೦ ಜನರ ಯುವಕರ ತಂಡವು ಸುಮಾರು ೧೧ ವರ್ಷಗಳಿಂದ ಅನ್ನದಾಸೋಹ ಕಾರ್ಯಕ್ರಮವನ್ನು ಅಯೋಜನೆ ಮಾಡಿಕೊಂಡು ಬರುತ್ತಿದೆ. ನಂತರ ೨ ದಿನ ಬೇರೆ ಕ್ಯಾಂಪಿನ ಭಕ್ತರು ಸಹ ಅನ್ನಸಂತರ್ಪಣೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ.
ಬೇರೆ ಕಡೆ ಪ್ರಸಾದ ವ್ಯವಸ್ಥೆ: ತಾಲೂಕಿನ ಮಲ್ಲಟದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ, ನವಲಕಲ್ ಬೃಹನ್ಮಠದಲ್ಲಿ, ಪಟ್ಟಣದ ಹೊರವಲಯದಲ್ಲಿರುವ ವಿ.ಆರ್.ಎಸ್ ಶಾಲೆ ಮುಂಭಾಗ, ವೈ.ಎ.ಜಿ ಲೇಔಟ್, ಅಂಚೇಕಛೇರಿ ಸಮೀಪದ ಅಚ್ಚಾ ವೈಜನಾಥ ಸಾಹುಕಾರ, ಆರ್.ಕೆ.ಚನ್ನಪ್ಪ ಸಾಹುಕಾರ, ಮಲ್ಲಪ್ಪ ಸಾಹುಕಾರ ಅರಕೇರಿ, ಕೆಇಬಿ ಆದ ನಂತರ, ತಿಪ್ಪಲದಿನ್ನಿ ಕ್ರಾಸ್, ಅತ್ರನೂರು, ನಿಲ್ಲೋಗಲ್ ಕ್ಯಾಂಪ್ ಆದ ನಂತರ ಸೇರಿದಂತೆ ಇನ್ನಿತರ ಕಡೆಯಲ್ಲಿ ಅನ್ನದಾಸೋಹ, ಹಣ್ಣು- ಹಂಪಲು, ತಂಪುಪಾನಿಯ ನೀಡುತ್ತಿದ್ದಾರೆ . ಒಟ್ಟಿನಲ್ಲಿ ಪಾದಯಾತ್ರೆಯ ಮೂಲಕತೆರಳುವ ಭಕ್ತರಿಗೆ ತಮ್ಮ ಕೈಲಾಸಷ್ಟು ಸಹಾಯ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ, ನಾವು ಶ್ರೀಶೈಲಾಕ್ಕೆ ಹೋಗದಿದರೂ ಸೇವೆಯಲ್ಲಿ ಮಲ್ಲಿಕಾರ್ಜುನ ಕಾಣುತ್ತಾರೆ.