ಶ್ರೀಶಾಂತ್ ಇನ್ನೂ ಫ್ರೀ ಬರ್ಡ್


ನವದೆಹಲಿ, ಸೆ.13 -ಭಾರತದ ವೇಗದ ಬೌಲರ್ ಎಸ್. ಶ್ರೀಶಾಂತ್ ವಿರುದ್ಧದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ 7 ವರ್ಷಗಳ ಶಿಕ್ಷೆ ಭಾನುವಾರ (ಸೆಪ್ಟೆಂಬರ್ 13) ರಂದು ಕೊನೆಗೊಂಡಿದೆ. ಈ ಮೂಲಕ ಸುದೀರ್ಘ ಕಾಲದ ಬಳಿಕ ಶ್ರೀಶಾಂತ್, ಕ್ರಿಕೆಟ್‌ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ಪಾಳ್ಗೊಳ್ಳಲು ಅರ್ಹತೆ ಹೊಂದಿದ್ದಾರೆ.
2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಶಾಂತ್ ಮೊದಲಿಗೆ ಆಜೀವ ಶಿಕ್ಷೆಗೆ ಒಳಗಾಗಿದ್ದರು. ಆದರೆ ಕಳೆದ ವರ್ಷ ಬಿಸಿಸಿಐನ ಒಂಬುಡ್ಸಮನ್ ಡಿ.ಕೆ. ಜೈನ್ ಅವರು ಇದನ್ನು 7 ವರ್ಷಗಳಿಗೆ ಇಳಿಸಿದ್ದರು. ಈಗ ಈ ಶಿಕ್ಷೆ ಸಂಪೂರ್ಣವಾಗಿದ್ದು ಮುಂದಿನ ದಿನಗಳಲ್ಲಿ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ.
37 ವರ್ಷದ ಶ್ರೀಶಾಂತ್ ನಿಷೇಧ ಅಂತ್ಯದ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿ ವೃತ್ತಿ ಜೀವನವನ್ನು ಪುರಾರಂಭಿಸುವ ಆಶಯವನ್ನು ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೇರಳ ಕ್ರಿಕೆಟ್ ಸಂಸ್ಥೆ ಕೂಡ ಈ ಹಿಂದೆ ಪ್ರತಿಕ್ರಿಯಿಸಿದ್ದು ಫಿಟ್‌ನೆಸ್ ಸಾಬೀತುಪಡಿಸಿದರೆ ಶ್ರೀಶಾಂತ್ ಅವರನ್ನು ಪರಿಗಣಿಸುವುದಾಗಿ ಹೇಳಿಕೊಂಡಿತ್ತು.
ಈ ವರ್ಷದ ಭಾರತೀಯ ದೇಶೀಯ ಕ್ರಿಕೆಟ್ ಆವೃತ್ತಿ ಆಗಸ್ಟ್‌ನಲ್ಲಿ ಆರಂಭಗೊಳ್ಳಬೇಕಿತ್ತು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಅದನ್ನು ಮುಂದೂಡಲಾಗಿದೆ. ಕೇರಳ ಕ್ರಿಕೆಟ್ ಮಂಡಳಿ ಈ ಕ್ರಿಕೆಟ್ ಋತುವಿನಲ್ಲಿ ಶ್ರೀಶಾಂತ್‌ಗೆ ಆಡುವ ಅವಕಾಶವನ್ನು ನೀಡಿದರೆ ಮತ್ತೆ ದೇಶಿಯ ಕ್ರಿಕೆಟ್ ಮೂಲಕ ಕ್ರಿಕೆಟ್ ವೃತ್ತಿ ಜೀವನಕ್ಕೆ ಶ್ರೀಶಾಂತ್ ಮರಳಲಿದ್ದಾರೆ. ಆದರೆ ಅದು ಯಾವಾಗ ಎಂಬುದು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ