ಶ್ರೀಶರಣಬಸವೇಶ್ವರರ 202ನೇ ಪುಣ್ಯ ಸ್ಮರಣೋತ್ಸವ ಮಾ.29ರಂದು ಉಚ್ಛಾಯಿ, 30ರಂದು ಭವ್ಯ ರಥೋತ್ಸವ

ಕಲಬುರಗಿ:ಮಾ.27: ಇಲ್ಲಿನ ಶ್ರೀ ಶರಣಬಸವೇಶ್ವರರ 202ನೇ ಪುಣ್ಯ ಸ್ಮರಣೋತ್ಸವ ಹಾಗೂ ಪೀಠಾರೋಹಣ ಸ್ಮರಣಾರ್ಥ ಇದೇ ಮಾ. 29ರಂದು ಸಂಜೆ 6ಕ್ಕೆ ಉಚ್ಛಾಯಿ ಹಾಗೂ ಮಾ.30ರಂದು ರಥೋತ್ಸವ ಜರುಗಲಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಗವರ್ನರ್ ಸದಸ್ಯರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ತಿಳಿಸಿದರು.
ಶ್ರೀ ಶರಣಬಸವೇಶ್ವರ ಮಹಾ ಸಂಸ್ಥಾನದ ದಾಸೋಹ ಮನೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾ.30ರಂದು ಸಂಜೆ 6ಕ್ಕೆ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಹಾಗೂ 9ನೇ ಮಹಾದಾಸೋಹ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಶ್ರೀ ಶರಣಬಸವೇಶ್ವರರ ಪರುಷ ಬಟ್ಟಲು (ಪ್ರಸಾದ ಬಟ್ಟಲು) ಪ್ರದರ್ಶನ, ಲಿಂಗ ಸಜ್ಜಿಕೆಗಳ ದಿವ್ಯ ದರ್ಶನ ಹಾಗೂ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಮಾ.29ರಂದು ನಡೆಯುವ ಉಚ್ಛಾಯಿ ಕಾರ್ಯಕ್ರಮದಿಂದ ಹಿಡಿದು ಏಪ್ರಿಲ್ 9ರವರೆಗೆ ಎಲ್ಲ ಧಾರ್ಮಿಕ ಆಚರಣೆಗಳು ಸಾಂಗವಾಗಿ ನೆರವೇರಲಿವೆ. ಒಟ್ಟು 15 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಮೊದಲ ದಿನ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ. ಮಾ.30ರಂದು ತೇರಿನ ಉತ್ಸವಗಳು ಶರಣಬಸವೇಶ್ವರರು ದೈವಾಧೀನರಾದ ಪ್ರತೀಕವಾಗಿ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಾತ್ರೋತ್ಸವ ನಡೆಯುವ ಪ್ರತಿದಿನವೂ ದೇವಸ್ಥಾನದ ಆವರಣದಲ್ಲಿರುವ ಶಿವಾನುಭವ ಮಂಟಪದಲ್ಲಿ ಉಪನ್ಯಾಸಕರಿಂದ ಶರಣಬಸವೇಶ್ವರರ ತತ್ವ ಸಿದ್ಧಾಂತಗಳ ಮತ್ತು ಶಿವಶರಣರ ಕುರಿತಾದ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ. ಇದರ ಜೊತೆಗೆ, ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸುವ ಭಜನಾ ತಂಡಗಳಿಂದ ರಾತ್ರಿಯಿಡೀ ಐದು ದಿನಗಳ ಕಾಲ ಶರಣಬಸವೇಶ್ವರರ ಭಜನೆ ಹಾಗೂ ಕೀರ್ತನೆಗಳು ನಡೆಯಲಿವೆ ಎಂದು ವಿವರಿಸಿದರು.

ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ, ಶರಣಬಸವೇಶ್ವರ ಸಂಸ್ಥಾನ ಮತ್ತು ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿ.ಜಿ.ಸಾಗರ, ಅರುಣಕುಮಾರ್ ಮಾಲಿಪಾಟೀಲ್, ಉದ್ಯಮಿ ಸಂತೋಷ್ ಲಂಗರ್, ಸಮಾಜ ಸೇವಕ ಪಾಂಡುರಂಗರಾವ್ ದೇಶಮುಖ, ಡಂಗೋರಿ ಮಾದಿಗ ಸಮಾಜ ಅಧ್ಯಕ್ಷ ಬಾಬು ಸುಂಠಾಣಕರ್, ಲೇಡಿಮೋಡ್ ಮುಖ್ಯಸ್ಥ ಜಗನ್ನಾಥ ಡಿಗ್ಗಿ, ಗಂಜ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶ್ರೀಮಂತ ಉದನೂರ, ಫರಾಜುಲ್ ಖಮರುಲ್ ಇಸ್ಲಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶ್ರೀ ಶರಣಬಸವೇಶ್ವರ ನಾಟಕ ಪ್ರದರ್ಶನ
ಶ್ರೀ ಶರಣಬಸವೇಶ್ವರರ 202ನೇ ಉಚ್ಛಾಯಿ ಮತ್ತು ರಥೋತ್ಸವ ಪ್ರಯುಕ್ತ ಜಾತ್ರೋತ್ಸವದ ಮೊದಲ ದಿನದಿಂದ ಯುಗಾದಿ ಆರಂಭಕ್ಕೆ ಮೂರು ದಿನಗಳು ಬಾಕಿ ಇರುವವರೆಗೆ ಶ್ರೀ ಶರಣಬಸವೇಶ್ವರ ನಾಟಕ ಪ್ರದರ್ಶನ ನಡೆಯಲಿದೆ ಎಂದು ಡಾ.ದಾಕ್ಷಾಯಿಣಿ ಎಸ್.ಅಪ್ಪ ತಿಳಿಸಿದರು.

ಸಂಸ್ಥಾನದ ಆವರಣದಲ್ಲಿರುವ ಶಿವಾನುಭವ ಮಂಟಪದಲ್ಲಿ ನಿತ್ಯ ರಾತ್ರಿ ನಾಟಕ ಪ್ರದರ್ಶನ ನಡೆಯಲಿದ್ದು, ಭಕ್ತರಿಗಾಗಿ ಈ ಪ್ರದರ್ಶನ ಸಂಪೂರ್ಣವಾಗಿ ಉಚಿತ ಎಂದರು.

ಯಾರ್ಯಾರು ಏನಂದರು?

ಬುದ್ಧ ವಿಹಾರ, ಶ್ರೀಶರಣಬಸವೇಶ್ವರ ಸಂಸ್ಥಾನ ಮತ್ತು ಹಜರತ್ ಖಾಜಾ ಬಂದೇನವಾಜ್ ಅವರು ನೆಲೆಸಿರುವ ಕಲಬುರಗಿ ನಗರವು ಮಹಾಸಂಗಮವಾಗಿದ್ದು, ಭಾವೈಕ್ಯತೆಯ ದೃಷ್ಟಿಯಿಂದ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ಅತ್ಯಂತ ಪ್ರಮುಖವಾಗಿದೆ.

– ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ

==
ರಾಷ್ಟ್ರೀಯ ಭಾವೈಕ್ಯತೆಯ ದೃಷ್ಟಿಯಿಂದ ಶ್ರೀ ಶರಣಬಸವೇಶ್ವರರ ಜಾತ್ರೆ ನಮ್ಮ ಭಾಗದ ಅತಿದೊಡ್ಡ ಜಾತ್ರೆಯಾಗಿದ್ದು, ಲಕ್ಷಾಂತರ ಭಕ್ತರು ತಮ್ಮ ಹರಕೆ ತೀರಿಸಲು ಜಾತ್ರೋತ್ಸವದಲ್ಲಿ ಭಾಗವಹಿಸುತ್ತಾರೆ. ಹೀಗಾಗಿ, ಜಾತ್ರೋತ್ಸವದಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇರುವಂತೆ ಎಲ್ಲರೂ ನೋಡಿಕೊಳ್ಳಬೇಕಿದೆ.
-ಅಲ್ಲಮಪ್ರಭು ಪಾಟೀಲ್

ಶಾಸಕರು, ಕಲಬುರಗಿ ದಕ್ಷಿಣ ಕ್ಷೇತ್ರ

==
ದೀಪಾವಳಿ ಮತ್ತು ಹೋಳಿ ಮಾದರಿಯಲ್ಲಿ ಶ್ರೀ ಶರಣಬಸವೇಶ್ವರರ ಜಾತ್ರೋತ್ಸವ ಸಹ ಭಾವೈಕ್ಯತೆಯೊಂದಿಗೆ ಆಚರಿಸಲಾಗುತ್ತದೆ. ಶ್ರೀ ಶರಣಬಸವೇಶ್ವರರು ಹಾಗೂ ಹಜರತ್ ಖಾಜಾ ಬಂದೇ ನವಾಜ್ ಅವರು ನೆಲೆಸಿರುವ ಪುಣ್ಯಭೂಮಿ ಇದು.
-ಕನೀಜ್ ಫಾತಿಮಾ, ಶಾಸಕರು

ಕಲಬುರಗಿ ಉತ್ತರ ಕ್ಷೇತ್ರ

==
ಶ್ರೀ ಶರಣಬಸವೇಶ್ವರರ ರಥೋತ್ಸವದ ವೇಳೆ ಪ್ರದರ್ಶಿಸಲ್ಪಡುವ ಪರುಷ ಬಟ್ಟಲು ವೀಕ್ಷಣೆಯಿಂದ ಮಳೆ-ಬೆಳೆ ಸಮೃದ್ಧವಾಗಿರುತ್ತದೆ. ರೋಗ ಮುಕ್ತ ಜೀವನಕ್ಕೆ ಪರಷು ಬಟ್ಟಲಿನ ದರ್ಶನ ಹೆಚ್ಚು ಸಹಾಯಕಾರಿ ಎಂಬ ಮಾತು ಶತಮಾನಗಳಿಂದ ಸಾಬೀತಾಗಿದೆ.
-ತಿಪ್ಪಣ್ಣಪ್ಪ ಕಮಕನೂರ, ಸದಸ್ಯರು

ಕರ್ನಾಟಕ ವಿಧಾನ ಪರಿಷತ್

==
ಶ್ರೀ ಶರಣಬಸವೇಶ್ವರರ ಜಾತ್ರೋತ್ಸವ ಸಾಮಾಜಿಕ ನ್ಯಾಯದ ಸಂಕೇತ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಶ್ರೀಶರಣಬಸವೇಶ್ವರ ಮಹಾಸಂಸ್ಥಾನ ಶತಮಾನಗಳಿಂದ ಮಾಡುತ್ತಾ ಬರುತ್ತಿದೆ. ಇದು ನಮ್ಮ ಪಾಲಿನ ಹೆಮ್ಮೆ.
-ಡಾ.ಡಿ.ಜಿ.ಸಾಗರ
ರಾಜ್ಯ ಸಂಚಾಲಕರು

ದಲಿತ ಸಂಘರ್ಷ ಸಮಿತಿ

==
ಶ್ರೀ ಶರಣಬಸವೇಶ್ವರರ ಜಾತ್ರೋತ್ಸವದಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ಹೀಗಾಗಿ, ಅವರ ಸುರಕ್ಷತೆಯ ದೃಷ್ಟಿಯಿಂದ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಮನ ಹರಿಸಿದರೆ ಒಳ್ಳೆಯದು.
-ಅರುಣಕುಮಾರ್ ಮಾಲಿ ಪಾಟೀಲ್

ಅಧ್ಯಕ್ಷರು, ವೀರಶೈವ ಸಮಾಜ

==
ಎಲ್ಲ ವರ್ಗದ ಸಮಾಜಗಳನ್ನು ಬೆಸೆಯುವ ಕೆಲಸವನ್ನು ಶ್ರೀಶರಣಬಸವೇಶ್ವರ ಸಂಸ್ಥಾನ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದೆ. ಈ ಕಾರಣಕ್ಕಾಗಿಯೇ ಶ್ರೀ ಶರಣಬಸವೇಶ್ವರರ ಜಾತ್ರೋತ್ಸವಕ್ಕೆ ತನ್ನದೇ ಆದ ಮಹತ್ವವಿದೆ.
-ಶ್ರೀಮಂತ ಉದನೂರ
ಅಧ್ಯಕ್ಷರು, ಗಂಜ್ ವ್ಯಾಪಾರಿಗಳ ಸಂಘ

ಕಲಬುರಗಿ

==
ಶರಣಬಸವೇಶ್ವರ ಜಾತ್ರೋತ್ಸವದ ಯಶಸ್ಸಿಗಾಗಿ ನಾವೆಲ್ಲರೂ ಶ್ರಮಿಸೋಣ. ಈ ಜಾತ್ರೆ ನಮ್ಮ ಭಾಗದ ಹೆಮ್ಮೆ ಮಾತ್ರವಲ್ಲ; ಇಡೀ ಕಲ್ಯಾಣ ಕರ್ನಾಟಕ ಭಾಗದ ಸಾಂಸ್ಕøತಿಕ ಪ್ರತೀಕ ಕೂಡ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ.
-ಪಾಡುರಂಗರಾವ್ ದೇಶಮುಖ
ಮುಖಂಡರು/ಸಮಾಜ ಸೇವಕರು