ಶ್ರೀವೀರಭದ್ರ ದೇವರ ವಾರ್ಷಿಕ ಗುಗ್ಗಳೋತ್ಸವ

ಧಾರವಾಡ,ನ8 : ‘ಆಹಹಾ ವೀರಾ… ಆಹಹಾ ರುದ್ರಾ… ಹೇ ಶಂಭೋ…ನಮ್ಮ ಶ್ರೀವೀರಭದ್ರದೇವರು ಹುಟ್ಟಿದಾಗಲೇ ಹೂವಿನ ಕಾಶಿ, ವಿಷ್ಣು ಕಾಶಿ, ಬ್ರಹ್ಮ ಕಾಶಿ, ಮೆಟ್ಟುವ ಆವಿಗೆ, ಸಾವಿರ ಶಿರಸ್ಸು, ಮೂರುಸಾವಿರ ಕಣ್ಣು, ಎರಡು ಸಾವಿರ ಭುಜ…ಜಟಾಧಾರಿ, ಶೆಡಕಿನ ಹಗ್ಗ, ಗಜದಂಡಾ, ಗಜಾಂಕುಶ ಚಪ್ಪಗೊಡಲಿಯೊಂದಿಗೆ ನಮ್ಮ ಶ್ರೀವೀರಭದ್ರ ದೇವರು ಹೇಗೆ ಬರುತ್ತಾನೆಂದರೆ… ‘ಆಹಹಾ ವೀರಾ… ಆಹಹಾ ರುದ್ರಾ… ಹೇ ಶಂಭೋ…’ ಎಂದೆಲ್ಲ ಕಾಶಿಕಟ್ಟಿದ ಪುರವಂತರು ಒಡಬುಗಳನ್ನು ಹೇಳುತ್ತಿದ್ದಂತೆ ಸಂಬಾಳ ವಾದ್ಯಗಳು ನಿರಂತರ ಮೊಳಗಿದವು. ಮತ್ತೊಂದೆಡೆ ಭಕ್ತಗಣದ ಜಯಕಾರದ ಉದ್ಘೋಷವೂ ಮೇಳೈಸಿತ್ತು.
ಈ ಭಾವುಕ ಸನ್ನಿವೇಶ ನಿರ್ಮಾಣವಾದದ್ದು ಸೋಮವಾರ ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿಯ ಶ್ರೀವೀರಭದ್ರ ದೇವರ ದೇವಾಲಯದಲ್ಲಿ ಜರುಗಿದ ವಾರ್ಷಿಕ ಗುಗ್ಗಳೋತ್ಸವದ ಸಂದರ್ಭದಲ್ಲಿ.
ಭಕ್ತಗಣದ ಭಕ್ತಿಯ ಸಂಕಲ್ಪದೊಂದಿಗೆ ನಡೆದ ಈ ಗುಗ್ಗಳೋತ್ಸವವನ್ನು ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಗುಗ್ಗಳ ಕೊಡಗಳಿಗೆ ಅಗ್ನಿಸ್ಪರ್ಶ ಮಾಡಿ ಉದ್ಘಾಟಿಸಿದರು.
ಈ ಗುಗ್ಗಳೋತ್ಸವದಲ್ಲಿ ಹಿರಿಯ ಪುರವಂತರಾದ ಮರೇವಾಡದ ಬಸವಂತಪ್ಪ ಕಂಬಾರ, ಕರಡಿಗುಡ್ಡದ ಮಡಿವಾಳಪ್ಪ ಕುರುವಿನಕೊಪ್ಪ, ಸುಳ್ಳದ ದೇವೇಂದ್ರಪ್ಪ ಪತ್ತಾರ, ಹಳೇ ಹುಬ್ಬಳ್ಳಿಯ ಸತೀಶ ಮೊಗಲಿಶೆಟ್ಟರ, ಅರುಣ ಕಂಬಾರ, ನಿಂಗಪ್ಪ ಕಂಬಾರ, ರುದ್ರಪ್ಪ ಕಂಬಾರ, ಮಲ್ಲಿಕಾರ್ಜುನ ಕುರುವಿನಕೊಪ್ಪ, ಈರಪ್ಪ ಕಂಬಾರ ಹಾಗೂ ಸಂಬಾಳ ವಾದ್ಯದಲ್ಲಿ ಶಿವಾನಂದ ಕುಂಬಾರ ಹಾಗೂ ಶರಣಬಸಪ್ಪ ಕಂಬಾರ ಅವರು ಸೇವೆಸಲ್ಲಿಸಿದರು. ಅಮ್ಮಿನಬಾವಿ ಗ್ರಾಮದ ಶ್ರೀಬಸವಣ್ಣ (ನಂದೀಶ್ವರ) ದೇವರ ದೇವಾಲಯದ ನಂದೀಕೋಲು, ಪಲ್ಲಕ್ಕಿ ಹಾಗೂ ಗುಡಿ ಓಣಿಯ ಕರಡಿಮಜಲು ಗುಗ್ಗಳೋತ್ಸವಕ್ಕೆ ಮೆರಗು ನೀಡಿದವು. ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಅಮ್ಮಿನಬಾವಿ ಮತ್ತು ಸುತ್ತಲಿನ ಬಹುಪಾಲು ಗ್ರಾಮಗಳ ಭಕ್ತಗಣ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಇದಕ್ಕೂ ಮುನ್ನ ಸೋಮವಾರ ಪ್ರಾತಃಕಾಲದಲ್ಲಿ ಶ್ರೀವೀರಭದ್ರ ದೇವರಿಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ ಶಿವಾನಂದಸ್ವಾಮಿ ಹಿರೇಮಠ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ವೀರಯ್ಯ ಹಿರೇಮಠ, ವಿನಾಯಕ ಹಿರೇಮಠ ಇವರ ವೈದಿಕತ್ವದಲ್ಲಿ ಜರುಗಿದವು.
ಸಂಜೆ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕ ದೀಪೋತ್ಸವದಲ್ಲಿ ಗ್ರಾಮದ ವಿವಿಧ ಗಣ್ಯರೂ ಸೇರಿದಂತೆ ಸಮಸ್ತ ಭಕ್ತಾದಿಗಳು ಪ್ರಣತಿಗಳನ್ನು ಬೆಳಗಿಸಿ ಭಕ್ತಿಯ ನಮನ ಸಲ್ಲಿಸಿದರು.