ಶ್ರೀವಿದ್ಯಾಕಣ್ವ ವಿರಾಜತೀರ್ಥರಿಂದ ಸೇವಾಕರ್ತರಿಗೆ ಸನ್ಮಾನ

ಕಲಬುರಗಿ:ಸೆ.15:ಸುಮಾರು ಎರಡು ಶತಮಾನಗಳ ಇತಿಹಾಸವಿರುವ ಶುಕ್ಲಯಜುರ್ವೇದಿಯ ಶಾಖ ಮಠವಾದ
ಸುರಪುರ ತಾಲೂಕಿನ ಶ್ರೀಮತ್ ಕಣ್ವಮಠ ಮೂಲ ಮಹಾಸಂಸ್ಥಾನ ಹುಣಸಿಹೊಳೆಯಲ್ಲಿ ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀ ಪಾದಂಗಳವರು ಶುಭಕೃತ ನಾಮ ಸಂವತ್ಸರದ ತಮ್ಮ ತೃತೀಯ ಚಾತುರ್ಮಾಸ್ಯ ಭಕ್ತರು ಹಾಗೂ ಶಿಷ್ಯರ ಅಪೇಕ್ಷೆಯ ಮೇರೆಗೆ ಜುಲೈ 23 ರಿಂದ ಸೆಪ್ಟಂಬರ್ 10 ಅನಂತ ಚತುರ್ದಶಿಯವರೆಗೆ 48 ದಿನ ನಿರಂತರವಾಗಿ ಜಪ-ತಪಾದಿ ಅನುಷ್ಠಾನವನ್ನು ಹಾಗೂ ಜ್ಞಾನಸತ್ರದಲ್ಲಿ ತೊಡಗಿಸಿಕೊಂಡು ಚಾತುರ್ಮಾಸ್ಯ ವೃತವನ್ನು ಅನುಷ್ಠಾನಗೊಳಿಸಿದ್ದರೆಂದು ವಿನುತ ಎಸ್ ಜೋಶಿ ತಿಳಿಸಿದರು.

ಶ್ರೀಪಾದಂಗಳವರ ಚಾತುರ್ಮಾಸ್ಯ ವೃತಾಚರಣೆಯ ಪರ್ವಕಾಲದಲ್ಲಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳಾದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಅಷ್ಟೋತ್ತರ, ವಿವಿಧ ಜಿಲ್ಲೆಗಳ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮಗಳು, ಪಂಡಿತರಿಂದ ಪ್ರವಚನ, ವಿದ್ವಾನರಿಂದ ದಾಸವಾಣಿ ಕಾರ್ಯಕ್ರಮ, ನೂಲಹುಣ್ಣಿಮೆ ಪ್ರಯುಕ್ತ ಸಾಮೂಹಿಕ ಶುಕ್ಲಯಜುರ್ವೇದಿಯ ಯಜ್ಞೋಪವೀತ ಧಾರಣೆ ಮತ್ತು ನೂತನ ಉಪಾಕರ್ಮ, ರಕ್ಷಾ ಬಂಧನ, ಶ್ರೀ ಸತ್ಯನಾರಾಯಣ ಮಹಾಪೂಜೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಉಚಿತ ನೇತ್ರ ಚಿಕಿತ್ಸೆ ಮತ್ತು ಕೋವಿಡ್ ಬೂಸ್ಟರ್ ಡೋಸ್ ಲಸಿಕಾಕರಣ ಕಾರ್ಯಕ್ರಮಗಳನ್ನು ಶ್ರೀಮಠವು ಹಮ್ಮಿಕೊಂಡಿತ್ತು.

ಹುಣಸಿಹಳೆಯಲ್ಲಿ ನಡೆದ ಚಾತುರ್ಮಾಸ್ಯ ವ್ರತವನ್ನು ಅತಿ ವಿಜೃಂಭಣೆಯಿಂದ ಯಶಸ್ವಿಯಾಗಲು ಸಹಕರಿಸಿದ ಸೇವೆ ಸಲ್ಲಿಸಿದ ಭಕ್ತರು ಶಿಷ್ಯರು ಅಭಿಮಾನಿಗಳು ಹಿತೈಷಿಗಳು ಶ್ರೀಮತ್ ಕಣ್ವಮಠಕ್ಕೆ ಸೇವೆ ಸಲ್ಲಿಸಿದ ಸೇವಾಕರ್ತರನ್ನು ಹಾಗೂ ವೈದ್ಯರು, ವಕೀಲರು ಪತ್ರಕರ್ತರು, ಗ್ರಾಮ ಪಂಚಾಯತ ಸದಸ್ಯರನ್ನು, ರಾಜಕೀಯ ಜನನಾಯಕರನ್ನು ಶ್ರೀಮತ್ ಕಣ್ವಮಠ ಆಡಳಿತಾಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರೀಪಾದಂಗಳವರು ಸನ್ಮಾನಿಸಿ, ಶ್ರೀವಿಠ್ಠಲಕೃಷ್ಣ ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳು ಸಕಲ ಸೌಭಾಗ್ಯ ಐಶ್ವರ್ಯಗಳನ್ನು ನೀಡಲಿ ಶಾಖಾಭಿಮಾನಿಗಳಾದ ನಾವೆಲ್ಲರೂ ಶ್ರೀಮಠದೊಂದಿಗೆ ಸಂಪರ್ಕದಲ್ಲಿದ್ದು ಭಕ್ತಿ ಶಕ್ತಿಯನ್ನು ಸಂಪಾದಿಸೋಣ, ಶ್ರೀ ವಿಠ್ಠಲಕೃಷ್ಣ ಹಾಗೂ ಸಮಸ್ತ ಯತಿವರೆಣ್ಯರ ಕೃಪೆಗೆ ಪಾತ್ರರಾಗೋಣ ಎಂದು ಆಶೀರ್ವದಿಸಿದರು.

ಟ್ರಸ್ಟನ ಅಧ್ಯಕ್ಷರಾದ ಮನೋಹರ ಮಾಡಿಗೇರಿ, ಉಪಾಧ್ಯಕ್ಷರಾದ ರಾಜು ಜೋಶಿ, ದಿವಾನರಾದ ಸುರೇಶ್ ಕುಲಕರ್ಣಿ, ಔದುಂಬರಭಟ್ ಜೋಶಿ, ಪಾಪಣ್ಣಚಾರ್ಯ ರಂಗಮಪೇಟೆ, ಪ್ರಸನ್ನ ಅಲಂಪಲ್ಲಿ, ವಿನುತ ಏಸ್ ಜೋಶಿ, ಹಾಗೂ ಪ್ರಮುಖರಾದ ಭೀಮಾಚಾರ್ಯ ಜೋಶಿ, ನರಸಿಂಹಾಚಾರ್ಯ ಜೋಶಿ ವನದುರ್ಗ, ಕಮಲಾಕರರಾವ್ ದೇಶಪಾಂಡೆ, ಅಪ್ಪಣ್ಣ ಸುರಪುರ, ಪ್ರಾಣೇಶರಾವ ಕವಿತಾಳ, ಪರೀಕ್ಷಿತಾಚಾರ್ಯ ಗುಡಗುಂಟಿ, ಸುರುಪುರದ ಕಾತ್ಯಾಯಿನಿ ಭಜನಾ ಮಂಡಳಿ ಮಂಡಳಿಯ ಸದಸ್ಯೆಯರು, ಸಾವಿರಾರು ಭಕ್ತರು ಉಪಸ್ಥಿತರಿದ್ದರು.