ಶ್ರೀಲಕ್ಷ್ಮಿರಂಗನಾಥ ರಥೋತ್ಸವ ಅದ್ದೂರಿ

ದೇವದುರ್ಗ,ಮೇ.೦೭- ತಾಲೂಕಿನ ಮಾನಸಗಲ್ ಗ್ರಾಮದ ಐತಿಹಾಸಿಕ ಶ್ರೀಲಕ್ಷ್ಮಿರಂಗನಾಥ ಜಾತ್ರೆ ನಿಮಿತ್ತ ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ಮಧ್ಯೆ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.
ಐದು ದಿನಗಳ ನಡೆಯುವ ಜಾತ್ರಾ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಗುರುವಾರ ಸಂಜೆ ಉಚ್ಛಾಯ ಮಹೋತ್ಸವ ಜರುಗಿತು. ಶುಕ್ರವಾರ ಬೆಳಗ್ಗೆ ಶ್ರೀಲಕ್ಷ್ಮಿರಂಗನಾಥ ದೇವರಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ವಿಶೇಷ ಅಲಂಕಾರ ಮಾಡಲಾಯಿತು. ತೆಂಗಿನತೋರಣ, ಬಾಳೆದಿಂಡು, ಮಾವಿನ ತೋರಣ ಕಟ್ಟಿ, ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಸಂಜೆ ೫ಕ್ಕೆ ಶ್ರೀಲಕ್ಷ್ಮಿರಂಗನಾಥ ಸ್ವಾಮಿಯನ್ನು ಬೆಳ್ಳಿ, ಚಿನ್ನ, ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಸಂಜೆ ೬ಗಂಟೆಗೆ ಲಕ್ಷಾಂತರ ಭಕ್ತರ ಮಧ್ಯೆ ಅದ್ದೂರಿಯಾಗಿ ರಥೋತ್ಸವ ಜರುಗಿತು. ಭಕ್ತರು ಹೂವು, ಉತ್ತತ್ತಿ, ಮಂಡಾಳು ಅರ್ಪಿಸಿದರು. ಜಾತ್ರೆಯಲ್ಲಿ ರಾಯದ ವಿವಿಧ ಭಾಗದ ಭಕ್ತರು, ಆಂಧ್ರಪ್ರದೇಶ, ತೆಲಂಗಾಣದ ಭಕ್ತರು ಭಾಗವಹಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ ಒದಗಿಸಲಾಗಿತ್ತು. ಭಾನುವಾರ ಜಾನುವಾರುಗಳ ಜಾತ್ರೆ ಜರುಗಲಿದೆ.