ಶ್ರೀಲಂಕಾ ಪ್ರತಿಭಟನಾಕಾರಕ ಆಕ್ರೋಶಕ್ಕೆ ಪುಸ್ತಕಗಳು ಭಸ್ಮ

ಕೊಲಂಬೊ, ಜು.೨೦- ಜುಲೈ ೯ರಂದು ಕೊಲಂಬೊದಲ್ಲಿನ ತನ್ನ ಖಾಸಗಿ ನಿವಾಸಕ್ಕೆ ದಾಳಿ ನಡೆಸಿದ್ದ ಸರಕಾರ ವಿರೋಧಿ ಪ್ರತಿಭಟನಾಕಾರರು, ಮನೆಗೆ ಬೆಂಕಿ ಹಚ್ಚಿದ್ದರಿಂದ ೧೨೫ ವರ್ಷ ಹಿಂದಿನ ಪಿಯಾನೊ ಹಾಗೂ ಸುಮಾರು ೪೦೦೦ ಪುಸ್ತಕಗಳು ನಾಶವಾಗಿವೆ ಎಂದು ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.
ನಾಶಗೊಂಡ ಪುಸ್ತಕಗಳಲ್ಲಿ ಕೆಲವು ನೂರು ವರ್ಷದಷ್ಟು ಹಳೆಯ ಅಮೂಲ್ಯ ಪುಸ್ತಕಗಳಾಗಿವೆ. ಪ್ರತಿಭಟನಾಕಾರರು ಹಚ್ಚಿದ ಬೆಂಕಿ ಕ್ಷಿಪ್ರವಾಗಿ ಹರಡಿದ್ದರಿಂದ ಮನೆಯಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟುಹೋಗಿವೆ ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ವಿಕ್ರಮಸಿಂಘೆ ಹೇಳಿದ್ದಾರೆ. ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುವ ಹಕ್ಕನ್ನು ತಾನು ಗೌರವಿಸುತ್ತೇನೆ. ಆದರೆ ಅಧ್ಯಕ್ಷೀಯ ನಿವಾಸ ಅಥವಾ ಪ್ರಧಾನಿಯ ಖಾಸಗಿ ನಿವಾಸದ ರೀತಿಯಲ್ಲಿ ಇತರ ಯಾವುದೇ ಸರಕಾರಿ ಕಟ್ಟಡವನ್ನು ಅತಿಕ್ರಮಿಸಲು ಅವಕಾಶ ನೀಡುವುದಿಲ್ಲ. ಸಾರ್ವಜನಿಕ ವ್ಯವಸ್ಥೆಗಳಿಗೆ ನುಗ್ಗುವ ಅಥವಾ ಸಂಸತ್ತಿಗೆ ಅಡ್ಡಿಪಡಿಸುವ ಜನರನ್ನು ತಡೆಯಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಲು ಸಶಸ್ತ್ರ ಪಡೆಗೆ ಮತ್ತು ಪೊಲೀಸರಿಗೆ ಮುಕ್ತ ಅಧಿಕಾರ ನೀಡಿದ್ದೇನೆ ಎಂದ ಅವರು, ಸಂಸತ್ ಸದಸ್ಯರು ಮತ್ತು ಸಂಸತ್ನ ಕಾರ್ಯನಿರ್ವಹಣೆಗೆ ತಡೆಯೊಡ್ಡದಂತೆ ಜನತೆಗೆ ಕರೆ ನೀಡಿದರು. ಪೊಲೀಸರು, ಸೇನಾ ಸಿಬಂದಿಯ ಮೇಲೆಯೂ ದಾಳಿ ನಡೆದಿದೆ. ಆದರೆ ಸಾಧ್ಯವಾದಷ್ಟು ಮಟ್ಟಿಗೆ ಶಸ್ತ್ರಾಸ್ತ್ರ ಬಳಸದಂತೆ ಅವರಿಗೆ ಸೂಚಿಸಲಾಗಿದೆ. ಆದರೆ ಅನಿವಾರ್ಯವಾದರೆ ಶಸ್ತ್ರಾಸ್ತ್ರ ಬಳಸಲೇಬೇಕಾಗುತ್ತದೆ ಎಂದು ವಿಕ್ರಮಸಿಂಘೆ ಹೇಳಿದ್ದಾರೆ.