ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ರಾಜೀನಾಮೆ

ಕೊಲೊಂಬೊ, ಜು. ೧೧- ತೀವ್ರ ಆರ್ಥಿಕ ಸಂಕಷ್ಟದಿಂದ ದಿವಾಳಿಯಾಗಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಜನಾಕ್ರೋಶಕ್ಕೆ ಮಣಿದು ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜಪಕ್ಸೆ ಇಂದು ರಾಜೀನಾಮೆ ನೀಡಿದ್ದಾರೆ. ಈ ಮೊದಲು ೧೩ ರಂದು ಪದತ್ಯಾಗ ಮಾಡುವುದಾಗಿ ಹೇಳಿದ್ದ ರಾಜಪಕ್ಸೆ ಒತ್ತಡಕ್ಕೆ ಮಣಿದು ಹುದ್ದೆಯಿಂದ ನಿರ್ಗಮಿಸಿದ್ದಾರೆ. ಈ ಕುರಿತು ಪ್ರಧಾನಿ ರನಿಲ್ ವಿಕ್ರಂ ಸಿಂಘೆ ಕಾರ್ಯಾಲಯದಿಂದ ಅಧಿಕೃತ ಹೇಳಿಕೆ ಹೊರಬಿದ್ದಿದೆ.
ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಶ್ರೀಲಂಕಾದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಆರ್ಥಿಕ ಪರಿಸ್ಥಿತಿಗೆ ಚೇತರಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನರ ಬದುಕು ದುಸ್ಥರವಾಗಿತ್ತು. ಶನಿವಾರ ಜನರ ತಾಳ್ಮೆ ಕಳೆದುಕೊಂಡು ಏಕಾಏಕಿ ಗೊಟಬಯ ನಿವಾಸಕ್ಕೆ ಸಾವಿರಾರು ನುಗ್ಗಿ ದಾಂಧಲೆ ನಡೆಸಿ ನಿವಾಸಕ್ಕೂ ಬೆಂಕಿ ಹಚ್ಚಿದ್ದರು.
ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ತನಕ ನಿವಾಸದಿಂದ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಆದರೆ ಜನರು ತಮ್ಮ ನಿವಾಸಕ್ಕೆ ಲಗ್ಗೆ ಹಾಕುವ ಮುನ್ನವೇ ರಾಜಪಕ್ಸೆ ಅವರು ಸುರಂಗ ಮಾರ್ಗ ಮೂಲಕ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದರು. ಅವರು ಎಲ್ಲಿಂದ್ದಾರೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿರಲಿಲ್ಲ. ಅಲ್ಲದೆ ಮನೆಯಲ್ಲಿ ಕೋಟ್ಯಂತರ ರೂಪಾಯಿಗಳು ಪತ್ತೆಯಾಗಿದ್ದವು. ಈ ಹಣವನ್ನು ಪ್ರತಿಭಟನೆಕಾರರೆ ಎಣಿಕೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪ್ರಧಾನಿಯವರ ಅಧಿಕೃತ ನಿವಾಸ ಟೆಂಪಲ್ ಟ್ರೀ ಯನ್ನು ಆಕ್ರಮಿಸಿಕೊಂಡಿರುವ ಪ್ರತಿಭಟನಾಕಾರರು ಅಲ್ಲಿಯೇ ಮೊಕ್ಕಂ ಹೂಡಿ ಅವರ ಮನೆ ಆವರಣದಲ್ಲಿ ಅಡುಗೆ ಮಾಡಿದ್ದಾರೆ.
ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಂದು ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ರನಿಲ್ ವಿಕ್ರಂ ಸಿಂಘೆ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.