ಶ್ರೀರಾಯರ ೩೫೨ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ

ಮಂತ್ರಾಲಯಕ್ಕೆ ಆಗಮಿಸುವ ಭಕ್ತರಿಗೆ ಸಕಲ ವ್ಯವಸ್ಥೆ-ಶ್ರೀಗಳು
ರಾಯಚೂರು.(ಮಂತ್ರಾಲಯ).ಆ೩೦:ಭಕ್ತರ ಪಾಲಿನ ಕಲಿಯುಗದ ಕಾಮಧೇನು ಎಂದು ಪ್ರಸಿದ್ಧಿಯ ಹೊಂದಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ (ಸಪ್ತರಾತ್ರೋತ್ಸವ) ಆರಾಧನಾ ಮಹೋತ್ಸವಕ್ಕೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಧ್ವಜಾರೋಹಣ ನೆರವೇರಿಸುವ ಮೂಲಕ ಆರಾಧನೆಗೆ ಚಾಲನೆ ನೀಡಿದರು.
ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ನೆರವೆರಿಸಿ ಶ್ರೀ ಮಠದ ಆವರಣದಲ್ಲಿ ಮಂಗಳವಾರ ಸಂಜೆ ಗೋ, ಅಶ್ವ, ಧಾನ್ಯ ಪೂಜೆಗಳನ್ನೂ ಶ್ರೀಗಳು ನೆರವೇರಿಸಿ ಮಾತನಾಡಿ, ಇಂದಿನಿಂದ ೭ ದಿನಗಳು ನಡೆಯುವ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧನಾ ಮಹೋತ್ಸವಕ್ಕೆ ಶ್ರೀ ಮಠ ಸಕಲ ಸಿದ್ದತೆ ಮಾಡಿಕೊಡಿದ್ದು, ದೇಶ ವಿದೇಶಗಳಿಂದ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಶ್ರಿಮಠ ವ್ಯವಸ್ಥೆ ಮಾಡಿಲಾಗಿದೆ. ರಾಯರ ಭಕ್ತಾದಿಗಳಿಗೆ ತುಂಗೆಯ ಸ್ನಾನಕ್ಕಾಗಿ ಎರಡು ರಾಜ್ಯ ಸರ್ಕಾರಗಳೊಡನೆ ಮಾತುಕತೆ ನಡೆಸಿದ್ದು,P ಜಲಾಶಯದಿಂದ ನೀರು ಬಿಡುವ ಭರವಸೆ ದೊರೆತಿದೆ.
ಆ.೩೧ ರಂದು ನಡೆಯುವ ಪೂರ್ವಾರಾಧನೆಯಂದು ವಿವಿಧ ಕ್ಷೇತ್ರಗಳ ಸಾಧಕರಾದ ವಿದ್ವಾನ್ ರಾಮವಿಠಲಾಚಾರ್ಯ, ವಿದ್ವಾನ್ ಡಾ.ಗರಿಕಿಪಾಟಿ ನರಸಿಂಹರಾವ್, ಶ್ರೀ.ಎನ್.ಚಂದ್ರಶೇಕರನ್, ಶ್ರೀ ವಿಶ್ವನಾಥ್ ಕರಾಡ್ ಇವರಿಗೆ ಶ್ರೀಮಠದ ಪ್ರತಿಷ್ಠಿತ ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದ್ದು, ಈ ಕಾರ್ಯಕ್ರದಲ್ಲಿ ಆಂಧ್ರ ಪ್ರದೇಶದ ರಾಜ್ಯಪಾಲರಾದ ನ್ಯಾ.ಅಬ್ದುಲ್ ನಜೀರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಆರಾಧನೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನರಹರಿತೀರ್ಥ ವಸತಿ ಗೃಹ, ಶ್ರೀಮೂಲರಾಮ ವಸತಿ ಗೃಹ, ನವೀಕರಿಸಲಾದ ವಿಜಯೀಂದ್ರ ವಸತಿ ಗೃಹ ಹಾಗೂ ಶ್ರೀಮಠದ ಪ್ರಾಕಾರದಲ್ಲಿ ನಿರ್ಮಿಸಲಾಗಿರುವ ಶ್ರೀಜಗನ್ನಾಧದಾಸರ ಜೀವನ, ಅವರ ಕೃತಿಗಳ ಪರಿಚಯಮಾಡಿಕೊಡುವ ಸಂಗ್ರಹಾಲಯ (ಮ್ಯೂಸಿಯಂ) ಅನ್ನು ಲೋಕಾರ್ಪಣೆ ಈ ಆರಾಧನೆಯಲ್ಲಿ ಮಾಡಲಾಗುವುದು ಎಂದರು.
ಇದೆ ವೇಳೆ ಮಠದ ಆವರಣದಲ್ಲಿ ಇರುವ ಶ್ರೀ ಮಠದ ಯತಿಗಳ ವೃಂದಾವನಗಳಿಗೆ ವಿಶೇಷ ಪೂಜೆ ಸಲ್ಲಿ ಪ್ರಾರ್ಥನೆ ಸಲ್ಲಿಸಿ,ವಿವಿಧ ಸೇವಾ ಕೇಂದ್ರಗಳ ಕಚೇರಿಗಳಿಗೆ ಪೂಜೆಯನ್ನು ನೇರವೆರಿಸಿ, ಮಠದ ಸಿಬ್ಬಂದಿ ಹಾಗೂ ಶ್ರೀ ಮಠದ ವಿದ್ಯಾರ್ಥಿಗಳಿಗೆ ವಸ್ತ್ರಗಳನ್ನು ವಿತರಿಸಿದರು.ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ವಿಶೇಷ ಹೂವಿನ ಅಲಂಕಾರ, ವಿದ್ಯುದ್ದೀಪ ಅಲಂಕಾರ ಮಾಡಲಾಗಿದೆ.
ಆರಾಧನೆ ಮಹೋತ್ಸವವು ಆಗಸ್ಟ್ ೨೯ರಿಂದ ಸೆಪ್ಟೆಂಬರ್ ೪ ರ ವರೆಗೆ ಏಳು ದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದ್ದು, ನಿತ್ಯ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ, ಉಪನ್ಯಾಸ , ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೂಲ ರಾಮದೇವರ ಪೂಜೆ, ರಾತ್ರಿ ಪ್ರಾಕಾರದಲ್ಲಿ ಶ್ರೀಪ್ರಹ್ಲಾದರಾಜರಿಗೆ ಪ್ರಭಾಉತ್ಸವ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.
ಆಗಸ್ಟ್ ೩೧ (ಗರುವಾರ) ಪೂರ್ವಾರಾಧನೆ, ಸೆಪ್ಟೆಂಬರ್ ೧ (ಶುಕ್ರವಾರ) ಮಧ್ಯಾರಾಧನೆ, ಸೆಪ್ಟೆಂಬರ್ ೨ (ಶನಿವಾರ) ಉತ್ತರರಾಧನೆ ಹಿನ್ನೆಲೆ ಮಠದ ರಥ ಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ.
ಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪ ಎಸ್.ಕೆ.ಶ್ರೀನಿವಾಸರಾವ್ ಮತ್ತು ವೆಂಕಟೇಶ್ ಜೋಶಿ , ಸಹಾಯಕ ವ್ಯವಸ್ಥಾಪಕ ಐ.ಪಿ.ನರಸಿಂಹಾಚಾರ್, ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.