ಶ್ರೀರಾಮ ನವಮಿಮರ್ಯಾದಾ ಪುರುಷೋತ್ತಮನ ನಾಮಸ್ಮರಣೆ

ಕಲಬುರಗಿ,ಮಾ 30: ಮರ್ಯಾದಾ ಪುರುಷೋತ್ತಮ ಶ್ರೀರಾಮ ನವಮಿಯನ್ನು ಇಂದು ನಗರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.ನಗರದ ಹೊಸಜೇವರಗಿ ರಸ್ತೆ ಶ್ರೀರಾಮಮಂದಿರ,ಬ್ರಹ್ಮಪುರದ ಪುರಾತನ ರಾಮದೇವಾಲಯ,ವಿವಿಧ ದೇವಾಲಯಗಳು ,ಹನುಮಾನ ಮಂದಿರಗಳು, ಮತ್ತು ರಾಘವೇಂದ್ರ ಸ್ವಾಮಿಗಳವರ ಮಠಗಳಲ್ಲಿ ಶ್ರೀರಾಮ ನವಮಿ ಆಚರಣೆ ವಿಜೃಂಭಣೆಯಿಂದ ಜರುಗಿತು.
ನಗರದ ಶ್ರೀರಾಮಂದಿರದಲ್ಲಿ ಭಕ್ತರು ರಾಮದೇವರ ದರ್ಶನಕ್ಕೆ ಸಾಲುಗಟ್ಟಿನಿಂತರು.ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು.ಶ್ರೀರಾಮ ಅಷ್ಟೋತ್ತರ,ಹಂಸನಾಮಕ,ಲಕ್ಷ್ಮೀನಾರಾಯಣ ಪಾರಾಯಣ ಸಂಘದಿಂದ ಸಾಮೂಹಿಕ ಪಾರಾಯಣ,ವೈಷ್ಣವಿ ಭಜನಾ ಮಂಡಳಿಯಿಂದ ಭಜನೆ ಜರುಗಿತು.ಶ್ರೀರಾಮ ಜನನ ತೊಟ್ಟಿಲೋತ್ಸವದಲ್ಲಿ ಹಲವಾರು ಭಕ್ತರು ಪಾಲ್ಗೊಂಡರು.
ರಾಮೋತ್ಸವ:
ಕಳೆದ ಯುಗಾದಿಯಂದು ರಾಮಮಂದಿರದಲ್ಲಿ ಪಾದೂರು ರಾಮಕೃಷ್ಣತಂತ್ರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಮೋತ್ಸವದ ಪ್ರಯುಕ್ತ ಪಂ. ಗೋಪಾಲಾಚಾರ್ಯ ಅಕಮಂಚಿ ಅವರಿಂದ ಪ್ರಾರಂಭವಾದ ರಾಮಾಯಣ ಪ್ರವಚನದ ಮಂಗಳ ಮಹೋತ್ಸವ ,ಪಲ್ಲಕ್ಕಿ ಉತ್ಸವ,ಶ್ರೀರಂಗ ಪೂಜೆ ಇಂದು ಸಂಜೆ ನಡೆಯಲಿದೆ.
ಶೋಭಾಯಾತ್ರೆ:
ರಾಮನವಮಿ ಉತ್ಸವ ಸಮಿತಿಯಿಂದ ಮಧ್ಯಾಹ್ನ ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ 15 ಅಡಿಯ ಶ್ರೀರಾಮ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಿತು.ಮಹಾರಾಷ್ಟದ ಅಕೋಲಾದ ಕಾಲಿಚರಣ್ ಮಹಾರಾಜರು ಸೇರಿದಂತೆ ಅನೇಕ ಧಾರ್ಮಿಕ ಮುಖಂಡರುಭಾಗಿಗಳಾದರು.