ಶ್ರೀರಾಮುಲು ಪತ್ನಿ ಹೆಸರಿನಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆ ಖಬ್ಜಾ ಸಿದ್ದರಾಮಯ್ಯ ಆರೋಪ

ಕುರುಗೋಡು:ಏ.26- ಸಚಿವ ಬಿ. ಶ್ರೀರಾಮುಲು ತಮ್ಮ ಪತ್ನಿ ಲಕ್ಷ್ಮೀ ಹೆಸರಿನಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆ ಖಬ್ಜಾ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ವಶಕ್ಕೆ ಪಡೆದು, ಸರ್ಕಾರ ಮತ್ತು ಸಹಕಾರದ ನೇತೃತ್ವದಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ, ರೈತರಿಗೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಚುನಾವಣಾ ಪ್ರಚಾರದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿ ಇದ್ದರೂ, ಐದು ವರ್ಷದ ಅವಧಿಯಲ್ಲಿ ಒಂದು ಸಾವಿರ ಕೋಟಿ ಅನುದಾನ ತಂದು, ಕಂಪ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಗಣೇಶ್ ಆಡಳಿತ ಪಕ್ಷದ ಶಾಸಕರಾಗುತ್ತಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ 5 ಸಾವಿರ ಕೋಟಿ ಅನುದಾನ ನೀಡಲಾಗುವುದು. ಗಣೇಶನ ಮಾತು ಕಡಿಮೆ, ಆದರೆ, ನಿಶಬ್ಧವಾಗಿ ಜನರ ಕೆಲಸ ಮಾಡಿದ್ದಾರೆ. ನನ್ನ ಮಾತಿನ ಮೇಲೆ ನಡೆದುಕೊಂಡು ಕಂಪ್ಲಿ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಮಾಡಿದ್ದಾರೆ. ಸಾಮಾನ್ಯ ಮನೆತನದಿಂದ ಬಂದಂತಹ ಗಣೇಶ್ ಅವರು ಜನರ ಕಷ್ಟ ಕಾರ್ಪಣ್ಯಗಳನ್ನು ಅರಿತು, ಕೆಲಸ ಮಾಡಿದ್ದಾರೆ. ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಶ್ರೀರಾಮುಲು ತಮ್ಮ ಪತ್ನಿ ಭಾಗ್ಯಲಕ್ಷ್ಮಿ ಹೆಸರಿಗೆ ಮಾಡುವ ಮೂಲಕ ಕಂಪ್ಲಿ ಜನತೆಗೆ ಮೋಸ ಮಾಡಿದ್ದಾರೆಂದು ಆರೋಪಿಸಿದರು.

ಶ್ರೀರಾಮಲು ಹಾಗೂ ಸೋದರ ಅಳಿಯ ಸುರೇಶ್ ಬಾಬು ಅವರ ಆಟ ಈ ಚುನಾವಣೆಯಲ್ಲಿ ನಡೆಯುವದಿಲ್ಲ. ಶ್ರೀರಾಮುಲು ಮತ್ತು ಸುರೇಶ್ ಬಾಬು ಈ ಬಾರಿ ಇಬ್ಬರು ಸೋಲುವುದು ಶತಸಿದ್ಧ. ಗಣೇಶಗೆ ಮತ ನೀಡಿದರೆ, ಸಿದ್ದರಾಮಯ್ಯಗೆ ಮತ ನೀಡಿದಂತೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯನೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಬಸವಣ್ಣನ ಸಿದ್ದಾಂತದ ಹಾದಿಯಲ್ಲಿ ಕಾಂಗ್ರೆಸ್ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸಿದ್ದು, ಅದರಂತೆಯೇ ಕಂಪ್ಲಿಯಲ್ಲಿಯೂ ಸಹ ಬೀಸಿದೆ. ನನ್ನ ಐದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಏಕಪಕ್ಷವಾಗಿ ಅಧಿಕಾರ ನಡೆಸಿದಾಗ, 165 ಭರವಸೆಗಳಲ್ಲಿ 150 ಭರವಸೆಗಳನ್ನು ಈಡೇರಿಸಿದ್ದು, ಆದರೆ, ಬಿಜೆಪಿ ಸರ್ಕಾರ 158 ಭರವಸೆಗಳಲ್ಲಿ ಕೇವಲ 58 ಭವರಸೆಗಳನ್ನು ಈಡೇರಿಸಿದೆ ಎಂದು ವ್ಯಂಗ್ಯವಾಡಿದರು.

ದೇಶದಲ್ಲಿ ಅಗತ್ಯ ವಸ್ತು ಬೆಲೆ ಏರಿಕೆಗಳನ್ನು ಕಡಿಮೆ ಮಾಡುವಲ್ಲಿ ಸಂಪೂರ್ಣವಾಗಿ ಮೋದಿ ಸರ್ಕಾರ ವಿಫಲವಾಗಿದೆ. ಬಿಜೆಪಿ ಸರ್ಕಾರ ಜನರ ಹೊಟ್ಟೆ ಮೇಲೆ ಬರೆ ಎಳೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪ್ರಣಾಳಿಕೆಯಲ್ಲಿ ನೀಡಿದ ಯೋಜನೆಗಳನ್ನು ಜನತೆಗೆ ಸಮರ್ಪಕವಾಗಿ ಒದಗಿಸಲಾಗುವುದು. ನಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲಾ ನಿಗಮದ ಸಾಲ ಮನ್ನಾ ಮಾಡಿರುವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಎಚ್ಎಲ್ಸಿ ಡಿ7ಗೆ ಏತಾನೀರಾವರಿ ಕಲ್ಪಿಸಿ, ರೈತರಿಗೆ ನೀರು ಒದಗಿಸಲಾಗುವುದು. ಶ್ರೀರಾಮುಲು, ಸುರೇಶ್ ಬಾಬು ಹಣದ ಆಮಿಷ ಒಡ್ಡಿದರೂ, ಗಣೇಶನಿಗೆ ಮತ ನೀಡಿ. ಕಳೆದ ಬಾರಿ ಕಂಪ್ಲಿ ಕ್ಷೇತ್ರದ ಕುರುಗೋಡಿಗೆ ಬಂದಾಗ ತೋರಿದಂತಹ ಉತ್ಸಾಹಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿರುವುದನ್ನು ನೋಡಿದರೆ, ಈ ಚುನಾವಣೆಯಲ್ಲಿ ಗಣೇಶ್ ಮತ್ತೊಮ್ಮೆ ಬಹುಮತದಿಂದ ಗೆಲ್ಲುವ ಭರವಸೆಯಿದೆ ಎಂದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ಗಣೇಶ, ಮುಖಂಡರಾದ ಕೆ.ಎಸ್.ಎಲ್.ಸ್ವಾಮಿ, ಅಲ್ಲಂ ವೀರಭದ್ರಪ್ಪ, ಮಾನಯ್ಯ, ಚೊಕ್ಕ ಬಸವನಗೌಡ, ಬಂಗಿ ಮಲ್ಲಯ್ಯ, ಶ್ರೀನಿವಾಸರಾವ್, ವಿಜಯಕುಮಾರ್, ರಾಜೇಶ, ಸುಧೀರ್, ಚನ್ನಬಸವರಾಜ, ಮೊದಲಾದವರು ಇದ್ದರು.