ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೬: ಸಮಾನ ನಾಗರಿಕ ಕಾನೂನು ಜಾರಿಗೆ ಒತ್ತಾಯಿಸಿ ರಾಜ್ಯಾದ್ಯಂತ ಐದು ಲಕ್ಷ ಸಹಿ ಸಂಗ್ರಹಿಸುವ ಅಭಿಯಾನವನ್ನು ಜುಲೈ 18ರಿಂದ 28ರವರೆಗೆ ನಡೆಸಲು ಶ್ರೀರಾಮ ಸೇನೆ ತೀರ್ಮಾನಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಿದೆ ಎಂದು ಹೇಳಿದರು. ಹತ್ತು ದಿನಗಳ ಕಾಲ ರಾಜ್ಯದಲ್ಲಿ 5 ಲಕ್ಷ ಸಹಿ ಸಂಗ್ರಹ ಮಾಡಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಅವರಿಗೆ ಸಲ್ಲಿಕೆ ಮಾಡಲಾಗುವುದು. ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭವಾಗಲಿದೆ. ಗಣ್ಯ ವ್ಯಕ್ತಿಗಳು, ಸ್ವಾಮೀಜಿಗಳು, ವಕೀಲರು, ವೈದ್ಯರು ಸೇರಿದಂತೆ ಗಣ್ಯರು ಚಾಲನೆ ಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು. ಕಾನೂನಿನ ಅಸಮಾನತೆ ನಿವಾರಣೆ ಆಗಬೇಕು. ವಿವಾಹ ಅಸಮಾನತೆಗೆ ನಿವಾರಣೆಯಾಗಬೇಕು. ಸ್ತ್ರೀ ಸ್ವಾತಂತ್ರ್ಯ ಭೇದ ಭಾವ ತೊಲಗಬೇಕು. ಆಸ್ತಿ ಹಂಚಿಕೆ ತಾರತಮ್ಯ ಇರಬಾರದು. ಮಹಿಳೆ ಶೋಷಣೆ ಮಾಡುವಂಥ ಕಾನೂನು ಜಾರಿಯಲ್ಲಿರುವುದು ಅಪಾಯಕಾರಿ. ಜನಸಂಖ್ಯೆ, ಕುಟುಂಬ ಯೋಜನೆ ನಿಯಂತ್ರಣ, ಅಪರಾಧ ತಡೆಗೆ ಒತ್ತಾಯಿಸಿ ಈ ಅಭಿಯಾನ ನಡೆಸಲಾಗುತ್ತಿದೆ. ಈ ಬಾರಿಯ ಲೋಕಸಭೆ ಅಧಿವೇಶನದಲ್ಲಿಯೇ ಸಮಾನ ನಾಗರಿಕ ಕಾನೂನು ಜಾರಿ ಮಂಡನೆಯಾಗಬೇಕು ಎಂದು ಒತ್ತಾಯಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಸಾಗರ್, ಜಿಲ್ಲಾ ಉಪಾಧ್ಯಕ್ಷ ಆಲೂರು ರಾಜಶೇಖರ್, ಜಿಲ್ಲಾ ಖಜಾಂಚಿ ಶ್ರೀಧರ್, ಡಿ. ಬಿ. ವಿನೋದ್ ರಾಜ್, ಬಿ. ಜಿ. ರಾಹುಲ್ ಸೇರಿದಂತೆ ಇತರರು ಹಾಜರಿದ್ದರು.